ಪೆಟ್ರೋಲ್ ಪಂಪ್‌ಗಳು ದೊಡ್ಡ ನೋಟು ನಿರಾಕರಿಸಿದರೆ ಟ್ವೀಟಿಸಿ: ಪ್ರಧಾನ್
ಹೊಸದಿಲ್ಲಿ, ನ.9: ರೂ. 500 ಹಾಗೂ ರೂ. 1000ದ ನೋಟುಗಳನ್ನು ಹಠಾತ್ತನೆ ಚಲಾವಣೆಯಿಂದ ಹಿಂದೆಗೆದುದು ಬುಧವಾರ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಪೆಟ್ರೋಲ್ ಪಂಪ್‌ಗಳು ಹಾಗೂ ಕೆಲವು ಚಿಲ್ಲರೆ ವ್ಯಾಪಾರಿಗಳು ದೊಡ್ಡ ವೌಲ್ಯದ ನೋಟುಗಳನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ. ಎಟಿಎಂಗಳು ಇಂದು ಕಾರ್ಯಾಚರಿಸಿಲ್ಲ.
ಮಂಗಳವಾರ ಮಧ್ಯರಾತ್ರಿಯಿಂದಲೇ ದೊಡ್ಡ ಮುಖ ಬೆಲೆಯ ನೋಟುಗಳು ಚಲಾವಣೆಯ ಕಾನೂನು ಬದ್ಧ ವೌಲ್ಯವನ್ನು ಕಳೆದುಕೊಂಡಿವೆ. ಆದರೆ, ಅವುಗಳನ್ನು ಬ್ಯಾಂಕ್‌ಗಳಲ್ಲಿ ಸಣ್ಣ ವೌಲ್ಯದ ನೋಟುಗಳಿಗೆ ಅಥವಾ ಹೊಸ ರೂ. 500 ಹಾಗೂ 2000 ಮುಖಬೆಲೆಯ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು.
ಪರಿಣಾಮಕಾರಿಯಾಗಬೇಕಾದರೆ ಅದು ಅನಿರೀಕ್ಷಿತ ನಿರ್ಧಾರವೇ ಆಗಿರಬೇಕಿತೆಂದು ವಿಶ್ಲೇಷಕರು ಅಭಿಪ್ರಾಯಿಸಿದರೆ, ಇದರಿಂದಾಗಿ ನಗದಿನ ಬೆಂಬಲದಿಂದಲೇ ನಡೆಯುತ್ತಿರುವ ಆರ್ಥಿಕತೆಗೆ ಇದರಿಂದ ಭಾರೀ ಸಮಸ್ಯೆಯಾಗಲಿದೆ. ವಿಶೇಷವಾಗಿ ಅತಿ ಬಡವರಿಗೆ, ಗ್ರಾಮೀಣ ಆರ್ಥಿಕತೆಯನ್ನೇ ಅವಲಂಬಿಸುವವರಿಗೆ ಅತ್ಯಂತ ಕಷ್ಟವಾಗಲಿದೆಯೆಂಬುದು ಟೀಕಾಕಾರರ ಅಂಬೋಣವಾಗಿದೆ.
ಈ ನಿರ್ಧಾರದಿಂದ ಅತಿ ಬಡವರಿಂದ ಹಿಡಿದು ಅತ್ಯಂತ ಶ್ರೀಮಂತರವರೆಗೆ ಜೀವನವು ಕಷ್ಟವಾಗಲಿದೆ. ಅವರು ಸಂಪತ್ತನ್ನು ಘೋಷಿಸಿದ್ದಾರೆಯೇ ಇಲ್ಲವೇ ಎಂಬುದು ಇಲ್ಲಿ ಪ್ರಸ್ತುತವಾಗುವುದಿಲ್ಲವೆಂದು ಅಂಕಣಕಾರ ಸ್ವಾಮಿನಾಥನ್ ಐಯ್ಯರ್ ಇಟಿ ನೌ ವಾಹಿನಿಗೆ ತಿಳಿಸಿದ್ದಾರೆ.
ಗ್ರಾಮೀಣ ಆರ್ಥಿಕತೆಗೆ ಸಂಬಂಧಿಸಿ, ಖರೀದಿಯ ಶಕ್ತಿಯು ಭಾರೀ ಪ್ರಮಾಣದಲ್ಲಿ ಇಂಗಿ ಹೋಗಲಿದೆಯೆಂದು ಅವರು ಹೇಳಿದ್ದಾರೆ.
(@dpradhanbjp) ದೊಡ್ಡ ಮುಖ ಬೆಲೆಯ ನೋಟುಗಳನ್ನು ಸ್ವೀಕರಿಸದಿರುವ ಸರಕಾರಿ ಸ್ವಾಮ್ಯದ ಪೆಟ್ರೋಲ್ ಪಂಪ್‌ಗಳಿಗೆ ಶಿಕ್ಷೆ ವಿಧಿಸಲಾಗುವುದು. ಶುಕ್ರವಾರ ರಾತ್ರಿಯವರೆಗೆ ಅವುಗಳನ್ನು ಸ್ವೀಕರಿಸುವಂತೆ ಪಂಪ್‌ಗಳಿಗೆ ಸೂಚನೆ ನೀಡಲಾಗಿದೆ. ಈ ನಿಯಮ ಉಲ್ಲಂಘಿಸುವ ಯಾವುದೇ ಪೆಟ್ರೋಲ್ ಪಂಪ್‌ನ ವಿರುದ್ಧ ದೂರು ನೀಡಲು ಟ್ವಿಟರ್‌ನಲ್ಲಿ ತನ್ನನ್ನು ಸಂಪರ್ಕಿಸಬಹುದೆಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಜನರಿಗೆ ತಿಳಿಸಿದ್ದಾರೆ.