ಕರ್ಣಾಟಕ ಬ್ಯಾಂಕ್: ಎರಡನೆ ತ್ರೈಮಾಸಿಕ ಅವಧಿಯಲ್ಲಿ 123.82 ಕೋಟಿ ರೂ. ನಿವ್ವಳ ಲಾಭ
ಮಂಗಳೂರು, ನ.9: ಕರ್ಣಾಟಕ ಬ್ಯಾಂಕ್ ಲಿಮಿಟೆಡ್ 2015-16ನೆ ಸಾಲಿನ ಎರಡನೆ ತ್ರೈಮಾಸಿಕ ಅವಧಿಯಲ್ಲಿ ಲಾಭ ಗಳಿಕೆ ಕಳೆದ ವರ್ಷದ ಎರಡನೆ ತ್ರೈಮಾಸಿಕ ಅವಧಿಗಿಂತ ಶೇ.21.10 ಏರಿಕೆಯಾಗಿದ್ದು 123.82 ಕೋಟಿ ರೂ. ನಿವ್ವಳ ಲಾಭಗಳಿಕೆಯಾಗಿದೆ.
ಅರ್ಧ ವರ್ಷದ ಅವಧಿಯ ನಿವ್ವಳ ಬಡ್ಡಿಯ ಮೇಲಿನ ಆದಾಯ 638.21 ಕೋಟಿ ರೂ.ಗಿಂತ 761.94 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಈ ಬಾರಿ ಬ್ಯಾಂಕಿನ ಬಡ್ಡಿ ಮೂಲದ ಆದಾಯ ಶೇ.19.39ಕ್ಕೆ ಏರಿಕೆಯಾಗಿದೆ. ನಿರ್ವಹಣಾ ಲಾಭ ಗಳಿಕೆಯಲ್ಲಿಯೂ ಶೇ. 37.35 ಏರಿಕೆಯಾಗಿದ್ದು, ಕಳೆದ ವರ್ಷದ ತ್ರೈಮಾಸಿಕ ಅವಧಿಯ 169.46 ಕೋಟಿ ರೂ.ಗಳಿಂದ 232.75 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
ಸೆಪ್ಟೆಂಬರ್ 2016ರ ಅಂತ್ಯದಲ್ಲಿ ಬ್ಯಾಂಕಿನ ಆರ್ಥಿಕ ವ್ಯವಹಾರ 89,707 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದರೊಂದಿಗೆ ಆರ್ಥಿಕ ವ್ಯವಹಾರದಲ್ಲಿ ಹಾಲಿ ವರ್ಷದಲ್ಲಿ ಶೇ 10.32 ಪ್ರಗತಿ ಸಾಧಿಸಲಾಗಿದೆ. ಠೇವಣಿ ಸಂಗ್ರಹದಲ್ಲಿ ಶೇ. 8.64 ಪ್ರಗತಿ ಸಾಧಿಸಿ 53,096 ಕೋಟಿ ರೂ. ಸಂಗ್ರಹಿಸಲಾಗಿದೆ. ಸಾಲ ನೀಡಿಕೆಯಲ್ಲೂ ಶೇ. 12.85 ಶೇ ಪ್ರಗತಿ ಸಾಧಿಸಲಾಗಿದೆ. ಒಟ್ಟು 36,611 ಕೋಟಿ ರೂ. ಸಾಲ ನೀಡಲಾಗಿದೆ.
ನಿವ್ವಳ ಸಾಲ ನೀಡಿಕೆಯಲ್ಲಿ ಶೇ. 2.63 ಎನ್‌ಪಿಎ ದಾಖಲಾಗಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.