×
Ad

ಟಿಪ್ಪು ಜಯಂತಿಗೆ ವಿರೋಧ ತಪ್ಪು: ಎಸ್ಸೆಸ್ಸೆಫ್‌

Update: 2016-11-09 21:50 IST

ಮಂಗಳೂರು, ನ.9: ರಾಜ್ಯ ಸರಕಾರವು ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿರುವಾಗ ಕೋಮುವಾದಿ ಮನಸ್ಥಿತಿಯಿಂದ ಅದನ್ನು ವಿರೋಧಿಸುವುದು ತಪ್ಪು ಎಂದು ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ಅಭಿಪ್ರಾಯಪಟ್ಟಿದೆ.

ಗತಿಸಿದ ಸ್ಮರಣೀಯ ವ್ಯಕ್ತಿಗಳನ್ನು ಮುಂದಿನ ತಲೆಮಾರು ನೆನಪಿನಲ್ಲಿಟ್ಟುಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಾಯಕ. ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಇತಿಹಾಸಕಾರರಲ್ಲಿ ಭಿನ್ನಮತವಿರುವುದು ಸಹಜ. ಭಾರತದಲ್ಲಿ ತಮ್ಮ ಅಸ್ತಿತ್ವಕ್ಕೆ ಬಹುದೊಡ್ಡ ಅಡ್ಡಿಯಾಗಿದ್ದ ಟಿಪ್ಪುವಿನ ಬಗ್ಗೆ ಬ್ರಿಟೀಷರು ವಿಕೃತವಾಗಿ ಚಿತ್ರಿಸಿದ್ದರೆ, ಅದನ್ನೇ ಎತ್ತಿಕೊಂಡು ನಿಷ್ಪಕ್ಷಪಾತಿ ಇತಿಹಾಸಕಾರರ ಉಲ್ಲೇಖಗಳನ್ನು ಅವಗಣಿಸುವುದು ನ್ಯಾಯವಲ್ಲ. ಇತಿಹಾಸ ಪುರುಷರ ಮೇಲಿನ ಆರೋಪಗಳನ್ನು ಮೀರಿ ನಿಂತು ಅವರ ಸಾಧನೆಗಳನ್ನು ಗುರುತಿಸುವುದು ಸಾಮಾನ್ಯ ಶಿಷ್ಟಾಚಾರ. ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದಿರುವುದು, ತನ್ನಿಬ್ಬರು ಕರುಳಕುಡಿಗಳನ್ನು ಒತ್ತೆಯಿಟ್ಟಿರುವುದು ನಿಸ್ಸಂಶಯ. ಈ ತ್ಯಾಗವನ್ನು ಅವಗಣಿಸುವಂತಿಲ್ಲ. ಟಿಪ್ಪು ಅನುಸರಿಸಿರಬಹುದಾದ ಕೆಲವು ರಾಜತಾಂತ್ರಿಕ ಕ್ರಮಗಳನ್ನು ಬೊಟ್ಟು ಮಾಡಿ ಮತಾಂಧನೆಂದು ಟೀಕಿಸುವುದೇ ನಿಜವಾದ ಮತಾಂಧತೆ. ಟಿಪ್ಪು ಮೈಸೂರಿನ ಹುಲಿ ಎಂಬುದಾಗಿ ಇಷ್ಟೂ ವರ್ಷಗಳಲ್ಲಿ ಇತಿಹಾಸ ಸಮ್ಮತಿಸಿರುವಾಗ ಅದನ್ನು ಇಲಿ ಮಾಡುವ ಪ್ರಲಾಪ ವ್ಯರ್ಥ ಪ್ರಯತ್ನವಷ್ಟೇ ಎಂದು ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News