ವೃದ್ಧೆಯನ್ನು ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ
ಮಂಗಳೂರು, ನ. 9: ವೃದ್ದೆಯೋರ್ವರನ್ನು ಕೊಲೆಗೈದ ಅಪರಾಧಿಯೋರ್ವನಿಗೆ ನಗರದ 4ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ.
ಗಂಜಿಮಠ ನಿವಾಸಿ ನಾರಾಯಣ ಗೌಡ (46) ಶಿಕ್ಷೆಗೊಳಗಾದ ಅಪರಾಧಿ. ಈತ 2007ರಲ್ಲಿ ತನ್ನ ದೂರದ ಸಂಬಂಧಿ ಕಲ್ಯಾಣಿ (82) ಎಂಬಾಕೆಯನ್ನು ಕೊಲೆಗೈದ ಆರೋಪವನ್ನು ಎದುರಿಸುತ್ತಿದ್ದ. ನ್ಯಾಯಾಲಯವು ಅಪರಾಧಿಗೆ 5 ಸಾವಿರ ದಂಡ ವಿಧಿಸುವಂತೆ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 6 ತಿಂಗಳ ಕಾಲ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. ಅಲ್ಲದೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನಿಧಿಯನ್ನು ನೀಡುವಂತೆ ತಿಳಿಸಿದೆ.
ಅಪರಾಧಿ ನಾರಾಯಣ ಗೌಡ ಗಂಜಿಮಠ ದೇಗುಲವೊಂದರಲ್ಲಿ ಮತ್ತು ಆಸುಪಾಸಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಮಧ್ಯಾಹ್ನದ ಊಟಕ್ಕೆ ವೃದ್ಧೆಯ ಮನೆಗೆ ತೆರಳಿದ್ದ. ಊಟದ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಕಲ್ಯಾಣಿ ಆತನಿಗೆ ಬುದ್ಧಿವಾದ ಹೇಳಿದ್ದರಿಂದ ಕುಪಿತಗೊಂಡು ನಾರಾಯಣ ಆಕೆಯ ತಲೆಗೆ ಬಡಿದಿದ್ದ. ಅಲ್ಲಿದ್ದ ಪುತ್ರಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಳು. ಆದರೆ, ಕಲ್ಯಾಣಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಅಂದಿನ ಬಜ್ಪೆ ಠಾಣಾ ಎಸ್ಸೈ ರಮೇಶ್ ಆರೋಪಿಯನ್ನು ಬಂಧಿಸಿದ್ದರು. ಪಣಂಬೂರು ವೃತ್ತ ನಿರೀಕ್ಷಕ ಚಂದ್ರಶೇಖರ್ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ನವೆಂಬರ್ 5 ರಂದು ಕೋರ್ಟ್‌ನಲ್ಲಿ ಆರೋಪಿಯ ಅಪರಾಧ ದೃಡಪಟ್ಟಿತ್ತು. ಬುಧವಾರ ನ್ಯಾಯಾಧೀಶ ನೇರಳೆ ವೀರಭದ್ರಯ್ಯ ಆರೋಪಿಗೆ ಶಿಕ್ಷೆ ಪ್ರಕಟಿಸಿದರು. ಪ್ರಾಸಿಕ್ಯೂಟರ್ ಹರೀಶ್ಚಂದ್ರ ಅವರು ವಾದ ಮಂಡಿಸಿದ್ದರು.