15 ವರ್ಷಗಳಿಂದ ಹಾಸಿಗೆ ಹಿಡಿದಿರುವ ಸ್ಟಂಟ್ ಕಲಾವಿದ
ಪಡುಬಿದ್ರೆ, ನ.9: ಹೀರೋ ಎತ್ತರದ ಕಟ್ಟಡದಿಂದ ಧುಮುಕಿ ಡಿಶುಂ ಡಿಶುಂ ಎಂದು ಖಳನಾಯಕನಿಗೆ ಬಾರಿಸುವ ಏಟಿಗೆ ಪ್ರೇಕ್ಷಕ ರೋಮಾಂಚನಗೊಳ್ಳುತ್ತಾನೆ. ಏಟು ತಿಂದ ವಿಲನ್ ಭೂಮಿಗೆ ಉರುಳಿದರೆ ಹೀರೋ ಇಮೇಜ್ ಇನ್ನಷ್ಟು ವೃದ್ಧಿಸುತ್ತದೆ. ಅದು ತೆರೆಯ ಮೇಲೆ. ಆದರೆ ತೆರೆಯ ಹಿಂದೆ ಸ್ಟಂಟ್ ಮಾಸ್ಟರ್‌ಗಳ ಸಾಹಸವಿರುತ್ತದೆ. ಸಿನೆಮಾದಲ್ಲಿ ಸ್ಟಂಟ್ ಮಾಸ್ಟರ್‌ಗಳ ಪಾತ್ರ ಅತೀ ಮುಖ್ಯವಾಗಿರುತ್ತದೆ. ಸ್ಟಂಟ್ ಮಾಸ್ಟರ್‌ಗಳು ಸಿನೆಮಾದಲ್ಲಿ ಸಮರ್ಥವಾಗಿ, ಪರಿಣಾಮಕಾರಿಯಾಗಿ ಫೈಟಿಂಗ್ ನಿರ್ವಹಿಸುತ್ತಾರೋ ಅಷ್ಟು ನಾಯಕನ ಪ್ರತಿಷ್ಠೆ ಹೆಚ್ಚುತ್ತದೆ.
ಇಂತಹ ಸ್ಟಂಟ್ ಮಾಸ್ಟರ್‌ನ ಕರುಣಾಜನಕ ಕಥೆಯಿದು. ಪಡುಬಿದ್ರಿ ಸಮೀಪದ ನಂದಿಕೂರಿನ ಅಡ್ವೆ ಹೊಸಮನೆಯ ನಿವಾಸಿ ವಿದ್ಯಾ ಶೆಟ್ಟಿ (43). 15ವರ್ಷಗಳ ಹಿಂದೆ ಅಂದರೆ 2001ರ ಜನವರಿ 21ರ ಮುಂಬೈಯ ಗೋರೆಗಾಂವ್ ಫಿಲ್ಮ್ ಸಿಟಿಯಲ್ಲಿ ‘ಮಾ ತುಜೇ ಸಲಾಂ’ ಎಂಬ ಸಿನೆಮಾದಲ್ಲಿ ಅರ್ಬಾಝ್ ಖಾನ್‌ಗಾಗಿ ರಿಹರ್ಸಲ್ ನಡೆಸುತ್ತಿದ್ದಾಗ ತಲೆಕೆಳಗಾಗಿ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು 15 ವರ್ಷಗಳಿಂದಲೂ ತನ್ನ ಮನೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ದಿ.ಮುದ್ದು ಶೆಟ್ಟಿ ಮತ್ತು ಇಂದಿರಾ ಶೆಟ್ಟಿ ದಂಪತಿಯ 42 ವರ್ಷ ಪ್ರಾಯದ ಪುತ್ರ ವಿದ್ಯಾ ಶೆಟ್ಟಿ.
ಮುಂಬೈಯಲ್ಲಿ 10ನೆ ತರಗತಿ ವಿದ್ಯಾರ್ಜನೆ ಮಾಡಿದ ವಿದ್ಯಾ ಆ ಬಳಿಕ ಸ್ಟಂಟ್ ಮಾಸ್ಟರ್ ಸಾಹಸ ನಿರ್ದೇಶಕ ರಾವ್ ಶೆಟ್ಟಿಯವರಿಂದ ಸ್ಟಂಟ್ ತರಬೇತಿ ಪಡೆದು ಚಿತ್ರರಂಗ ಪ್ರವೇಶಿಸಿದರು. ಎಳೆಯ ಪ್ರಾಯದಲ್ಲೇ ಸ್ಟಂಟ್ ಮಾಸ್ಟರ್ ಮಿಂಚಿದರು. ಸುನೀಲ್ ಶೆಟ್ಟಿ, ಸಂಜಯ್ ದತ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಧರ್ಮೇಂದ್ರ, ಹೃತಿಕ್ ರೋಶನ್, ಜಾಕಿಶ್ರಾಪ್, ಮನಿಷಾ ಕೊಯಿರಾಲಾ ಮಾತ್ರವಲ್ಲದೆ ಕನ್ನಡದ ಶಿವರಾಜ್ ಕುಮಾರ್, ಅನಂತ್‌ನಾಗ್ ಮೊದಲಾದ ನಟರ ಜತೆಗೆ ಇವರು ಸಾಹಸ ದೃಶ್ಯಗಳನ್ನು ಮಾಡಿದ್ದಾರೆ. ಹಿಂದಿಯ ದಾಮಿನಿ, ಅರ್ಜುನ್ ಪಂಡಿತ್, ಗದಾರ್, ಏಕ್ ಪ್ರೇಮ್ ಕಥಾ, ರಕ್ಷಕ್, ಚೈನಾ ಗೇಟ್, ವಾಸ್ತವ್, ನಿರ್ಬಂಧ ಅಲ್ಲದೇ ಕನ್ನಡದ ಎಕೆ 47 ಮುಂತಾದ ಹಲವು ಪ್ರಮುಖ ಚಿತ್ರಗಳ ಸಹಿತ ಹಿಂದಿ, ಕನ್ನಡ, ತೆಲುಗು ಸಹಿತ 800ಕ್ಕೂ ಅಧಿಕ ಸಿನೆಮಾಗಳಲ್ಲಿ ಸಾಹಸ ಪ್ರದರ್ಶನ ನೀಡಿದ್ದಾರೆ. ವಿದ್ಯಾ ಶೆಟ್ಟಿ ಬಾಲಿವುಡ್‌ನಲ್ಲಿ ಸ್ಟಂಟ್ ಮಾಸ್ಟರ್ ಆಗಿ ಮೈನವಿರೇಳಿಸುವ ಸಾಹಸಗಳು ಒಂದೆರಡಲ್ಲ. ಕವಚ ಹಾಕಿಕೊಂಡು ಮೈಮೇಲೆ ಬೆಂಕಿ ಹಚ್ಚುವುದು. ಈಜುಕೊಳದಲ್ಲಿ ಸಾಹಸ ಮೆರೆಯುವುದು. ಕುದುರೆ ಸವಾರಿಯಲ್ಲೇ ಕಸರತ್ತು. ಬಹು ಮಹಡಿ ಕಟ್ಟಡದಿಂದ ಧುಮುಕುವುದು. ಚಲಿಸುತ್ತಿರುವ ಹೆಲಿಕಾಪ್ಟರ್, ರೈಲುಗಳಿಂದ ಹಾರುವುದು. ಹೀಗೆ ಪ್ರತಿಕ್ಷಣವೂ ಜೀವನದ ಜತೆ ಚೆಲ್ಲಾಟವಾಡುತ್ತಾ ಲೆಕ್ಕವಿಲ್ಲದಷ್ಟು ಸಾಹಸ ಮೆರೆದಿದ್ದಾರೆ. ಆದರೆ ಈಗ ಮನೆಯಲ್ಲಿ ಅಸಹಾಯಕರಾಗಿ ನಡೆದಾಡಲೂ ಆಗದೆ ಮನೆಯವರ ಮೇಲೆಯೇ ಅವಲಂಬಿತರಾಗಿದ್ದಾರೆ. ಅವತ್ತು ನಡೆದಿರುವುದು ಆಕಸ್ಮಿಕ. ಮುಂಬೈಯ ಸ್ಟುಡಿಯೋದಲ್ಲಿ ‘ಮಾ ತುಜೆ ಸಲಾಂ’ ಚಿತ್ರೀಕರಣಕ್ಕಾಗಿ ಚಿತ್ರದ ನಾಯಕನ ಸಾಹಸಕ್ಕಾಗಿ ಏರ್ ರ್ಯಾಂಪ್‌ನಿಂದ ಎಸೆಯಲ್ಪಡುವ ದೃಶ್ಯ. ಏರ್ ರ್ಯಾಂಪ್‌ನಿಂದ ಬಟನ್ ಒತ್ತಿದಾಗ 15 ಅಡಿ ಎತ್ತರ 40 ಅಡಿ ದೂರಕ್ಕೆ ಎಸೆಯಲ್ಪಡುವ ದೃಶ್ಯಗಳು. ಈ ವೇಳೆ ಮೂರು ಬಾರಿ ಹಾರಿದೆ. ಆದರೆ ನಾಲ್ಕನೆ ಬಾರಿ ಎಸೆಯಲ್ಪಡುವಾಗ ತಲೆಕೆಳಗಾಗಿ ಬಿದ್ದು ಬೆನ್ನು ಮೂಳೆ ಮುರಿದಿದೆ ಎಂದು ಅಂದಿನ ದಿನವನ್ನು ನೆನಪಿಸಿಕೊಳ್ಳುತ್ತಾರೆ ವಿದ್ಯಾ ಶೆಟ್ಟಿ.
ಆ ಬಳಿಕ ಮುಂಬೈಯ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಕಾಲ ಚಿಕಿತ್ಸೆ ಪಡೆದರು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ 15ವರ್ಷಗಳಿಂದಲೂ ವಿವಿಧ ಚಿಕಿತ್ಸೆಗಳನ್ನು ನಡೆಸುತ್ತಾ ಬಂದರೂ ಯಾವುದೇ ಪ್ರಯೋಜನ ಕಂಡಿಲ್ಲ. ಬೆಂಗಳೂರು, ನೆಲಮಂಗಲ, ಮೈಸೂರು, ಬಳ್ಳಾರಿ, ಕಾರ್ಕಳ, ಬಾಗಲಕೋಟೆ ವೈದ್ಯರು-ಹೀಗೆ ಅವರಿವರು ಹೇಳಿದ ಕಡೆಗಳೆಲ್ಲಾ ಸುತ್ತಾಡಿದರು. ಔಷಧ, ಪಥ್ಯ ಎಲ್ಲವೂ ನಡೆಸಿ ಪ್ರಯೋಜನವಾಗಿಲ್ಲ. ಈಗ ಅವರಿಗಾಗಿ ನಿರ್ಮಿಸಿದ ಟ್ಯಾಂಕ್‌ನಲ್ಲಿ ದಿನಕ್ಕೆ ಎರಡು ಗಂಟೆಗಳ ಕಾಲ ಈಜಾಡುತ್ತಾರೆ.
ಯಾರೂ ಬರಲಿಲ್ಲ :
ದುರ್ಘಟನೆ ನಡೆದ ಬಳಿಕ ‘ಮಾ ತುಜೆ ಸಲಾಂ’ ಚಿತ್ರದ ನಿರ್ದೇಶಕ ಅನವರ್ಮ, ನಟ ಸುನೀಲ್ ಶೆಟ್ಟಿ ಸಹಿತ ಒಂದಿಬ್ಬರು ಅಲ್ಪ ಮಟ್ಟಿಗೆ ಸಹಾಯ ಮಾಡಿದ್ದಾರೆ. ಆದರೆ ಆ ಬಳಿಕ ಇತ್ತ ಯಾರೂ ತಲೆಹಾಕಲಿಲ್ಲ. ಆದರೆ ರವಿ ವರ್ಮ ಸರ್ ಅವರು ಉಡುಪಿಗೆ ಬಂದಾಗ ವಿಷಯ ತಿಳಿದು ಮನೆಗೆ ಭೆೇಟಿ ನೀಡಿದ್ದಾರೆ. ಅದು ಬಿಟ್ಟರೆ ಇದುವರೆಗೂ ಯಾರೂ ಬಂದಿಲ್ಲ.
ಯೋಚಿಸಿ ನಿರ್ಧರಿಸಿ:
ಸ್ಟಂಟ್ ಮಾಡುವವರು ನನ್ನಿಂದಾಗಬಹುದಾ ಎಂದು ಚಿಂತಿಸಿ ಸೇಫ್ಟಿ ಇದೆಯೇ ಎಂದು ಆಲೋಚಿಸಿ ಎಲ್ಲವೂ ಸರಿಯಾಗಿ ಇದೆಯೇ ಎಂದು ಪರೀಕ್ಷಿಸಿದ ಬಳಿಕ ಇಂತಹ ಸಾಹಸಕ್ಕೆ ಕೈಹಾಕಬೇಕು. ಯಾರ ಒತ್ತಡಕ್ಕೂ ಸಾಹಸಕ್ಕೆ ಇಳಿಯಬೇಡಿ. ಒಂದು ವೇಳೆ ಇಂತಹ ಸಾಹಸಕ್ಕೆ ಕೈ ಹಾಕಿ ಅವಘಡ ಸಂಭವಿಸಿದರೆ ಯಾವ ಚಿತ್ರತಂಡವೂ ನಮ್ಮತ್ತ ನೋಡುವುದಿಲ್ಲ.
ವಿದ್ಯಾ ಶೆಟ್ಟಿ, ಸ್ಟಂಟ್ ಕಲಾವಿದ