"ಮನುಷ್ಯ ಘನತೆ ಎತ್ತಿಹಿಡಿದರೆ ಮಾತ್ರ ಯಶಸ್ಸು"

Update: 2016-11-10 03:21 GMT

ವಾಷಿಂಗ್ಟನ್, ನ.10: ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆದ್ದು ಬೀಗುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಜರ್ಮನಿ ಚಾನ್ಸಲರ್ ಅಂಜೆಲಾ ಮರ್ಕೆಲ್ ಎಚ್ಚರಿಕೆಯ ಶುಭ ಹಾರೈಸಿದ್ದಾರೆ. ಟ್ರಂಪ್ ಅವರ ದ್ವೇಷಭಾಷಣದ ಇತಿಹಾಸದ ಹಿನ್ನೆಲೆಯಲ್ಲಿ ಮರ್ಕೆಲ್, "ಮನುಷ್ಯ ಘನತೆ ಎತ್ತಿಹಿಡಿದರೆ ಮಾತ್ರ ಯಶಸ್ಸು" ಎಂದು ಹೇಳಿದ್ದಾರೆ.

ಬ್ರಿಟನ್ ಪ್ರಧಾನಿ ತೆರೇಸಾ ಮೇ, ಟ್ರಂಪ್‌ಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಮರ್ಕೆಲ್ ಮಾತ್ರ, "ಸಮಾನತೆಯ ಹಕ್ಕುಗಳಿಗೆ ಟ್ರಂಪ್ ಬದ್ಧರಾಗಿದ್ದರೆ ಮಾತ್ರ ಅವರಿಗೆ ಸಹಕಾರ ನೀಡಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ. ಯಾವ ದೇಶದ ಮೂಲದವರೇ ಆಗಿದ್ದರೂ ಎಲ್ಲ ನಾಗರಿಕರ ಘನತೆ ಹಾಗೂ ಗೌರವವನ್ನು ಎತ್ತಿಹಿಡಿದರೆ ಮಾತ್ರ ಟ್ರಂಪ್ ಜೊತೆಗಿನ ಜರ್ಮನಿ ಸಂಬಂಧ ಸುಲಲಿತವಾಗಿರುತ್ತದೆ ಎಂದು ಹೇಳಿದ್ದಾರೆ. ಯೂರೋಪಿಯನ್ ಯೂನಿಯನ್ ಸಾವಿರಾರು ನಿರಾಶ್ರಿತರಿಗೆ ಆಶ್ರಯ ನೀಡುವಂತೆ ನಿರ್ಧಾರ ಕೈಗೊಳ್ಳುವಲ್ಲಿ ಮರ್ಕೆಲ್ ಪ್ರಮುಖ ಪಾತ್ರ ವಹಿಸಿದ್ದರು.

"ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಕಾನೂನಿಗೆ ಗೌರವ, ನಾಗರಿಕರು ಯಾವ ದೇಶದ ಮೂಲದವರು, ಅವರ ಬಣ್ಣ ಏನು, ಧರ್ಮ, ಲಿಂಗ, ಲೈಂಗಿಕ ಆಸಕ್ತಿ ಅಥವಾ ರಾಜಕೀಯ ಅಭಿಪ್ರಾಯಗಳ ಹೊರತಾಗಿ ಎಲ್ಲ ಮನುಷ್ಯರ ಗೌರವದ ಕಾಪಾಡುವ ನಂಬಿಕೆಯ ಮೇಲೆ ಉಭಯ ದೇಶಗಳ ಸಂಬಂಧ ನಿಂತಿದೆ ಎಂದು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News