ಅಮೆರಿಕದಾದ್ಯಂತ ಟ್ರಂಪ್ ವಿರುದ್ಧ ಪ್ರತಿಭಟನೆ
ಚಿಕಾಗೊ/ನ್ಯೂಯಾರ್ಕ್, ನ.10: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ವಿರುದ್ಧ ಅನಿರೀಕ್ಷಿತವಾಗಿ ಜಯ ಸಾಧಿಸಿ ನೂತನ ಅಧ್ಯಕ್ಷರಾಗಲು ಸಜ್ಜಾಗುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡೊ ಟ್ರಂಪ್ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ.
ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ವಿರೋಧಿಸಿ ಬುಧವಾರ ರಾತ್ರಿ ಸಿಯಾಟಲ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆಯೇ ಅಪಚಿತನೊಬ್ಬ ಗುಂಡಿನ ಹಾರಾಟ ನಡೆಸಿದ್ದು, ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದರೆ, ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.
ಗುಂಡು ಹಾರಾಟಕ್ಕೂ, ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ವೈಯಕ್ತಿಕ ಜಗಳದಿಂದಾಗಿ ಗುಂಡು ಹಾರಾಟ ನಡೆದಿದೆ. ಓರ್ವ ವ್ಯಕ್ತಿ ಜನರ ಗುಂಪಿನಿಂದ ಹೊರಬಂದು ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಸಿಯಾಟಲ್ ಪೊಲೀಸರು ತಿಳಿಸಿದ್ದಾರೆ.
ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಪ್ರತಿಭಟಿಸಿ ಅಮೆರಿಕದ ನಗರಗಳೆಲ್ಲೆಡೆ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ. ವಲಸಿಗರು, ಮುಸ್ಲಿಮರು ಹಾಗೂ ಇತರರ ಬಗ್ಗೆ ಟ್ರಂಪ್ ಚುನಾವಣಾ ಪ್ರಚಾರದ ವೇಳೆ ನೀಡಿರುವ ವಿವಾದಾತ್ಮಕ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಚಿಕಾಗೊದಲ್ಲಿ ಟ್ರಂಪ್ ಇಂಟರ್‌ನ್ಯಾಶನಲ್ ಹೊಟೇಲ್ ಹಾಗೂ ಟವರ್‌ನ ಹೊರಗೆ ಜಮಾಯಿಸಿದ್ದ 1,800 ಜನರು ‘‘ನೋ ಟ್ರಂಪ್!ಕೆಕೆಕೆ! ನೋ ರೇಸಿಸ್ಟ್ ಯುಎಸ್‌ಎ’’ ಎಂದು ಘೋಷಣೆ ಕೂಗಿದರು.
ಚಿಕಾಗೊ ಪೊಲೀಸರು ಈ ಪ್ರದೇಶದ ಮಾರ್ಗವನ್ನು ಬಂದ್ ಮಾಡಿ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದರು. ಬಂಧಿಸಲ್ಪಟ್ಟ ಅಥವಾ ಹಿಂಸಾಚಾರ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಫಿಲಡೆಲ್ಫಿಯಾ, ಬೋಸ್ಟನ್ ಹಾಗೂ ಪೋರ್ಟ್‌ಲ್ಯಾಂಡ್‌ನಲ್ಲಿ ಬುಧವಾರ ಸಂಜೆ ನೂರಾರು ಜನರು ಸೇರಿದ್ದರು. ಸ್ಯಾನ್ ಫ್ರಾನ್ಸಿಸ್ಕೊ, ಲಾಸ್ ಏಂಜಲಿಸ್ ಹಾಗೂ ಒಕ್ಲಾಂಡ್, ಕ್ಯಾಲಿಫೋರ್ನಿಯದಲ್ಲಿ ಟ್ರಂಪ್ ವಿರುದ್ಧ ರ್ಯಾಲಿ ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ. ಟೆಕ್ಸಸ್ ರಾಜಧಾನಿ ಆಸ್ಟಿನ್‌ನಲ್ಲಿ ಸುಮಾರು 400 ಜನರು ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.