ಉಡುಪಿಯಲ್ಲಿ ಟಿಪ್ಪುಜಯಂತಿಗೆ ಉಸ್ತುವಾರಿ ಸಚಿವರೇ ಗೈರು
ಉಡುಪಿ, ನ.10: ಸರಕಾರದ ವತಿಯಿಂದ ಆಯೋಜಿಸಲಾದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಗೈರು ಹಾಜರಾಗಿದ್ದಾರೆ.
ಉಡುಪಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಟಿಪ್ಪುಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್, ಮಧ್ವರಾಜ್ ಸಹಿತ ಸ್ಥಳೀಯ ಜನಪ್ರತಿನಿಧಿಗಳು ಗೈರುಹಾಜರಾಗಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಉಡುಪಿ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಭಾರತದ ಇತಿಹಾಸದಲ್ಲಿ ಸ್ಥಾನಪಡೆದಿರುವ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಸಮರ್ಥ ಹಾಗೂ ಜನಪರ ಆಡಳಿತಗಾರ ಎಂದರು.
ಟಿಪ್ಪು ದೂರದೃಷ್ಟಿಯುಳ್ಳ ಆಡಳಿತಗಾರನಾಗಿದ್ದು, ಜನರಿಗಾಗಿ ಹತ್ತು ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಮೈಸೂರು ಸಂಸ್ಥಾನವನ್ನು ಕೃಷಿ, ನೀರಾವರಿ, ಕೈಗಾರೀಕರಣದ ಮೂಲಕ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಸರ್ವಧರ್ಮ ಸಹಿಷ್ಣುತೆಯ ಮೂಲಕ ನಾಡಿನ ಅಭಿವೃದ್ಧಿಗೆ ಪಣತೊಟ್ಟು, ಬ್ರಿಟಿಷರ ವಿರುದ್ಧ ಹೋರಾಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಕೊರೆಯಾ, ತಾಂತ್ರಿಕತೆ, ಟಂಕಸಾಲೆ, ವಾಣಿಜ್ಯ ವ್ಯವಹಾರ ಪ್ರೋತ್ಸಾಹ, ರಫ್ತು ಉದ್ಯಮ, ಸಾಂಬಾರ ಪದಾರ್ಥಗಳ ಏಕಸ್ವಾಮ್ಯತೆ, ಟಂಕಸಾಲೆ, ಮಿಲಿಟರಿ ತಂತ್ರಜ್ಞಾನ ಅಭಿವೃದ್ಧಿ, ಬಂದೂಕು ನಿರ್ಮಾಣ ಎಲ್ಲದರಲ್ಲೂ ಸ್ವಾವಲಂಬನೆ ಸಾಧಿಸಿ ಅತ್ಯುತ್ತಮ ರಾಜನೀತಿಜ್ಞ ಎಂದು ಟಿಪ್ಪು ಹೆಸರುಗಳಿಸಿದ್ದ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ, ತಹಶೀಲ್ದಾರ್ ಮಹೇಶ್ಚಂದ್ರ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಯೋಗೇಶ್ವರ್, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಧಿಕಾರಿ ಹರೀಶ್ ಗಾಂವ್ಕರ್, ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.
ಕರಾಳ ದಿನಾಚರಣೆ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಉಡುಪಿ ಯಲ್ಲಿ ಕರಾಳ ದಿನಾಚರಣೆ ನಡೆಸಲು ಮುಂದಾದ ಬಿಜೆಪಿ ಹಾಗೂ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಲು ಯತ್ನಿಸಿದ ಸಮಿತಿ ಹಾಗೂ ಸಂಘಪರಿವಾರದ ಮುಖಂಡರನ್ನು ಮತ್ತು ಬನ್ನಂಜೆ ತಾಲೂಕು ಕಚೇರಿಯ ಮುಂದೆ ಕರಾಳ ದಿನ ಆಚರಿಸಲು ಯತ್ನಿಸಿದ ಬಿಜೆಪಿ ಮುಖಂಡರನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣು ವರ್ಧನ ನೇತೃತ್ವದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡರು.
ಇವರನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕೇಂದ್ರದಲ್ಲಿರಿಸಿ ಟಿಪ್ಪು ಜಯಂತಿ ಕಾರ್ಯಕ್ರಮ ಮುಗಿದ ಬಳಿಕ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಯಶ್ಪಾಲ್ ಸುವರ್ಣ, ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.