ಉಡುಪಿಯಲ್ಲಿ ಕಾಟಾಚಾರದ ಟಿಪ್ಪು ಜಯಂತಿ: ಹುಸೈನ್ ಕೋಡಿಬೆಂಗ್ರೆ
ಉಡುಪಿ, ನ.10: ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾದ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಗೈರು ಹಾಜರಾಗಿದ್ದು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಹೊರತು ಪಡಿಸಿ ಉಳಿದೆಲ್ಲ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು. ಕಾರ್ಯಕ್ರಮ ಆಯೋಜಿಸಲಾದ ಬ್ರಹ್ಮಗಿರಿ ಲಯನ್ಸ್ ಭವನಕ್ಕೆ ಒದಗಿಸ ಲಾದ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಬೆಳಗ್ಗೆ 10:10ಕ್ಕೆ ಆರಂಭ ಗೊಂಡ ಕಾರ್ಯಕ್ರಮವು 10:35ಕ್ಕೆ ಮುಕ್ತಾಯಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಬೇಕಾದ ಸಚಿವ ಪ್ರಮೋದ್ ಮಧ್ವರಾಜ್ ಬೆಂಗಳೂರಿಗೆ ತೆರಳಿರುವುದರಿಂದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳೇ ಉದ್ಘಾಟಿಸಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಜಿಪಂನ ಯಾವುದೇ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿರಲಿಲ್ಲ. 'ರಾಜ್ಯ ಸರಕಾರ ಎಲ್ಲ ಜಿಲ್ಲೆಗಳಲ್ಲಿ ಟಿಪ್ಪು ಜಯಂತಿ ಆಚರಿಸಲು ಆದೇಶ ನೀಡಿದೆ. ಆದರೆ ಉಡುಪಿಯಲ್ಲಿ ಕೇವಲ ಕಾಟಾಚಾರ ಎಂಬಂತೆ ಬರೇ 15 ನಿಮಿಷಗಳಲ್ಲಿಯೇ ಕಾರ್ಯಕ್ರಮವನ್ನು ಮುಗಿಸಲಾಯಿತು.
ಅಲ್ಲದೆ ಈ ಕಾರ್ಯಕ್ರಮಕ್ಕೆ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಗೈರು ಹಾಜರಾಗಿದ್ದಾರೆ' ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುಸೇನ್ ಕೊಡಿಬೇಂಗ್ರೆ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ನೋಡುವಾಗ ಇವರು ಮುಸ್ಲಿಮರು ಹಾಗೂ ಇತರ ಧರ್ಮೀ ಯರ ಮಧ್ಯೆ ಬಿರುಕು ಹುಟ್ಟಿಸುವುದಕ್ಕಾಗಿ ಟಿಪ್ಪು ಜಯಂತಿ ಆಚರಣೆ ನಡೆಸಿ ದಂತೆ ಕಾಣುತ್ತದೆ. ಈ ರೀತಿಯ ಕಾರ್ಯಕ್ರಮ ನಡೆಸಿ ಜನರನ್ನು ಮೂರ್ಖ ರನ್ನಾಗಿಸುವ ಕೆಲಸ ಇನ್ನು ಮುಂದೆ ಮಾಡಬಾರದು. ಇದಕ್ಕೆ ಸಚಿವರು, ಶಾಸಕರು, ಕಾಂಗ್ರೆಸ್ ಮುಖಂಡರು ಉತ್ತರಿಸಬೇಕಾಗಿದೆ. ಇಂತಹ ಕಾಟಾ ಚಾರದ ಕಾರ್ಯಕ್ರಮ ಎಂದಿಗೂ ಮಾಡುವುದು ಬೇಡ. ಬಿಜೆಪಿಯವರಾಗೆ ನೀವು ಕೂಡ ಮುಸ್ಲಿಮರನ್ನು ಇತರ ಧರ್ಮದವರೊಂದಿಗೆ ಎತ್ತಿ ಕಟ್ಟುವ ಕೆಲಸ ಮಾಡಬೇಡಿ ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಖಾಸಿಂ ಬಾರಕೂರು, ಸಲಾವುದ್ದೀನ್, ಅಬ್ದುಲ್ ಖತೀಬ್ ರಶೀದ್, ರಹಮತುಲ್ಲಾ ತೋನ್ಸೆ, ವಕ್ಫ್ ಸಲಹಾ ಮಂಡಳಿಯ ಜಿಲ್ಲಾಧ್ಯಕ್ಷ ಯಹ್ಯಾ ನಕ್ವಾ ಮತ್ತಿತರರು ಹಾಜರಿದ್ದರು.