"ಮಾರ್ಚ್ 22" ಕನ್ನಡ ಚಿತ್ರದ ಚಿತ್ರೀಕರಣಕ್ಕೆ ಚಾಲನೆ

Update: 2016-11-10 07:41 GMT

ಮಂಗಳೂರು / ಬೆಳಗಾವಿ, ನ.10: ಆಕ್ಮೆ ಮೂವೀಸ್ ಇಂಟರ್‌ನ್ಯಾಶನಲ್ ಲಾಂಛನದಲ್ಲಿ ಖ್ಯಾತ ನಿರ್ದೇಶಕ ಕೂಡ್ಲು ರಾಮಕೃಷ್ಣರನಿರ್ದೇಶನದಲ್ಲಿ ದುಬೈಯ  ಉದ್ಯಮಿ ಹಾಗೂ ಪ್ರಸಿದ್ದ ಗಾಯಕ ಹರೀಶ್ ಶೇರಿಗಾರ್ ನಿರ್ಮಾಣದ ಚಲನಚಿತ್ರ "ಮಾರ್ಚ್ 22"ಕ್ಕೆ ಚಾಲನೆ ನೀಡಲಾಯಿತು.

ಬೆಳಗಾವಿಯ ಹೊರವಲಯದ ನೇಸರ್ಗಿ ಸಮೀಪದ ಚಚಡಿ ಎಂಬಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ ರಟ್ ರಾಜರ ವಂಶದ ವಾಡೆ ಎಂಬ ಹೆಸರಿನ ಪುರಾತನ ಮನೆಯೊಂದರಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. 

ಬಿಜೆಪಿ ರಾಜ್ಯಸಭಾ ಸದಸ್ಯ  ಪ್ರಭಾಕರ್ ಕೋರೆಮೂಹೂರ್ತ ನೆರವೇರಿಸಿ ನೂತನ ಸಿನಿಮಾಕ್ಕೆ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದರು. ಬೆಳಗಾವಿಯ ಹೆಸರಾಂತ ಕೆಫೆ ಅಜಂತಾ ಹೋಟೆಲ್‌ನ ಮಾಲಕ ಆರ್.ಪಿ ಶೇರಿಗಾರ್ ದೀಪ ಬೆಳಗಿಸಿ ಚಿತ್ರಕ್ಕೆ ಶುಭ ಹಾರೈಸಿದರು.

ಶರ್ಮಿಳಾ ಶೇರಿಗಾರ್, ಚಿತ್ರದ ನಿರ್ದೇಶಕ ಕೂಡ್ಲು ರಾಮಕೃಷ್ಣ,  ಮುನೀಶ್ವೆರ ಕ್ರಿಯೇಶನ್ಸ್ ನ ಮಾಲಕ ನರೇಂದ್ರ .ಪಿ ಹಾಗೂ ರಾಜೇಶೇಖರ್.ಎ., ಮಂಗಳೂರಿನ ಉದ್ಯಮಿ ಪ್ರಕಾಶ್ ಶೇರಿಗಾರ್, ವಾಡೆ ಮನೆಯ ಮಾಲಕ ನಾಗರಾಜ್ ದೇಸಾಯಿ, ಬಹುಭಾಷ ನಟ ರವಿ ಕಾಳೆ, ಚಿತ್ರದ ನಾಯಕರಾದ ಆರ್ಯವರ್ಧನ್, ಕಿರಣ್ ರಾಜ್, ನಾಯಕಿಯರಾದ ಮೇಘಶ್ರೀ, ದೀಪ್ತಿ ಶೆಟ್ಟಿ ಹಾಗೂ ಮತ್ತಿತ್ತರ ಚಿತ್ರ ಕಲಾವಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದುಬೈನ ಹೆಸರಾಂತ ಆಕ್ಮೆ ಸಂಸ್ಥೆಯ ಆಡಳಿತ ನಿರ್ದೇಶಕ  ಹರೀಶ್ ಶೇರಿಗಾರ್  ಅವರ ನಿರ್ಮಾಣದೊಂದಿಗೆ ಖ್ಯಾತ ನಿರ್ದೇಶಕ ಕೂಡ್ಲು ರಾಮಕೃಷ್ಣರ ನಿರ್ದೇಶನದಲ್ಲಿ ಸ್ಯಾಂಡಲ್‌ವುಡ್‌ನ ಹೆಸರಾಂತ ನಟನಟಿಯರ ತಾರಗಣದೊಂದಿಗೆ ಮೂಡಿ ಬರಲಿರುವ "ಮಾರ್ಚ್ 22" ಕನ್ನಡ ಸಿನಿಮಾ ಒಂದು ವಿಭಿನ್ನ ಕಥೆ ಹಾಗೂ ಸಾಹಿತ್ಯವನ್ನು ಹೊಂದಿದೆ.

ಈಗಾಗಲೇ ಬಿಡುಗಡೆಗೆ ಸಿದ್ದವಾಗಿರುವ ಖನನ ಹಾಗೂ ಬಿಸಿನೆಸ್ ಕನ್ನಡ ಚಿತ್ರದ ನಾಯಕ ಆರ್ಯವರ್ಧನ್ ಹಾಗೂ  ಹಿಂದಿ ಮತ್ತು ಕನ್ನಡ ಧಾರವಾಹಿ ನಟ, "ಲವ್ 18" ಹಿಂದಿ ಚಿತ್ರದ ನಾಯಕ ಕಿರಣ್ ರಾಜ್ ಈ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಅದೇ ರೀತಿ ಟಾಲಿವುಡ್ ನಲ್ಲಿ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ತೀರ್ಥಹಳ್ಳಿಯ ಬೆಡಗಿ ಮೇಘಶ್ರೀ ಹಾಗೂ ದೀಪ್ತಿ ಶೆಟ್ಟಿ ಈ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಉಳಿದಂತೆ ಕನ್ನಡ ಚಿತ್ರರಂಗದ ದಿಗ್ಗಜರಾದ ಅನಂತ್ ನಾಗ್, ಲಕ್ಷ್ಮೀ,  ರವಿಶಂಕರ್, ಶರತ್ ಲೋಹಿತಾಶ್ವ, ರವಿಕಾಳೆ, ಜೈ ಜಗದೀಶ್, ವಿನಯ ಪ್ರಸಾದ್, ಪದ್ಮಜಾ ರಾವ್, ಸಾಧುಕೋಕಿಲ ಮತ್ತು ಯುವ ಕಲಾವಿದಾರಾದ ಸೃಜನ್ ರೈ, ಯುವ ಕಿಶೋರ್, ದುಬೈಯ ಕಲಾವಿದರಾದ ಚಿದಾನಂದ್ ಪೂಜಾರಿ, ಸುವರ್ಣ ಸತೀಶ್ ಹಾಗೂ ಮಂಗಳೂರಿನ ಕಲಾವಿದೆ ಪ್ರಶೋಭಿತಾ ಪ್ರಭಾಕರ್ ಮುಂತಾದವರು ತಾರಗಣದಲ್ಲಿದ್ದಾರೆ. ಒಂದು ಕಾಲದ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಜೋಡಿಗಳಾದ ಆನಂತ್ ನಾಗ್ ಹಾಗೂ ಲಕ್ಷ್ಮೀ ಯವರು ಬಹಳ ವರ್ಷಗಳ ಬಳಿಕ ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿರುವುದು ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್.

ಚಿತ್ರಕ್ಕೆ ಎನ್.ಜೆ.ರವಿಶೇಖರ್ ಸಂಗೀತ ನೀಡಿದ್ದು, ಮೋಹನ್ ಎಂ. ಅವರ ಛಾಯಾಗ್ರಹಣವಿದೆ, ಬಸವರಾಜ್ ಆರಸ್ ಸಂಕಲನ, ಸುಭಾಶ್ ಕಡಕೋಲ್ ಕಲೆ, ಮದನ್ ಹರಿಣಿ  ನೃತ್ಯ ನಿರ್ದೇಶನ ಮಾಡಲಿದ್ದಾರೆ. ಯಶಸ್ವಿ ಸ್ಟಂಟ್ ಮಾಸ್ಟರ್ ಕುಂಗ್‌ಫು ಚಂದ್ರು ಅವರ ಸಾಹಸ ನಿರ್ದೇಶನವಿದೆ. ಸಹ ನಿರ್ದೇಶನ ಕೆ.ಜಗದೀಶ್ ರೆಡ್ಡಿ, ಶರಣ್ಯ.ಬಿ., ನಾಗರಾಜ್ ಹಸನ್ ಹಾಗೂ ಅಚ್ಯುತ ರಾವ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಟ್ಟು 50 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕ ಶ್ರೀ ಹರೀಶ್ ಶೇರಿಗಾರ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News