ಮಧ್ಯಾಹ್ನವಾಗುತ್ತಲೇ ಬ್ಯಾಂಕ್‌ಗಳಲ್ಲಿ ಹಣ ಖಾಲಿ

Update: 2016-11-10 08:22 GMT

ಮಂಗಳೂರು, ನ.10: ಬುಧವಾರ ‘ಚಿಲ್ಲರೆ’ ಸಮಸ್ಯೆಗೆ ತುತ್ತಾಗಿದ್ದ ಜನಸಾಮಾನ್ಯರು, ಗುರುವಾರ ತಮ್ಮಲ್ಲಿರುವ 500 ಮತ್ತು 1,000 ರೂ.ವನ್ನು ವಿನಿಮಯ ಮಾಡಲು ಗುರುತಿನ ಚೀಟಿಯೊಂದಿಗೆ ಬ್ಯಾಂಕ್‌ಗಳ ಶಾಖೆಗಳಿಗೆ ಲಗ್ಗೆಯಿಟ್ಟರೂ ಕೂಡ ಮಧ್ಯಾಹ್ನವಾಗುತ್ತಲೇ ಬ್ಯಾಂಕ್‌ಗಳಲ್ಲಿ ಹಣ ಖಾಲಿಯಾದ್ದರಿಂದ ಬರಿಗೈಯಲ್ಲಿ ಮರಳಿದ್ದಾರೆ. ಇದು ಅನೇಕ ಮಂದಿ ಗ್ರಾಹಕರಿಗೆ ತೀವ್ರ ನಿರಾಶೆಯುಂಟು ಮಾಡಿತು.

ಗುರುವಾರದಿಂದ ಹಣ ವಿನಿಯಮ ಮಾಡಬಹುದು ಎಂಬ ಆಸೆಯೊಂದಿಗೆ ಗ್ರಾಹಕರು ಸುಮಾರು 9 ಗಂಟೆಗೆ ಸರದಿ ಸಾಲಿನಲ್ಲಿ ನಿಂತು ಕನಿಷ್ಠ 4 ಸಾವಿರ ರೂ. ಪಡೆದಿದ್ದಾರೆ. ಆದರೆ, ಮಧ್ಯಾಹ್ನವಾಗುತ್ತಲೇ ಬ್ಯಾಂಕ್‌ಗಳಲ್ಲಿ ಹಣ ಖಾಲಿಯಾದ ಕಾರಣ ಉಪಾಯವಿಲ್ಲದೆ ಮರಳಿದ್ದಾರೆ. ಇನ್ನು ಅಂಚೆ ಕಚೇರಿಗಳಲ್ಲೂ ವಿನಿಯಮಕ್ಕೆ ಅವಕಾಶವಿತ್ತು. ಆದರೆ ಹೆಚ್ಚಿನ ಅಂಚೆ ಕಚೇರಿಗಳಲ್ಲೂ ಇದೇ ಕಥೆಯಾಗಿದೆ. ಅಲ್ಲಿ 10-11 ಗಂಟೆಯಾಗುತ್ತಲೇ ಹಣ ಖಾಲಿಯಾಗಿದೆ.

ಮುಗಿಬಿದ್ದ ಜನತೆ:

ಗ್ರಾಹಕರು ಹಣ ವಿನಿಯಮ ಮಾಡಿಕೊಳ್ಳಲು ಮುಗಿಬಿದ್ದ ದೃಶ್ಯವೂ ಸಾಮಾನ್ಯವಾಗಿತ್ತು. ಅನೇಕ ಬ್ಯಾಂಕ್‌ಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಕೊನೆಗೆ ಮುಗಿಬಿದ್ದರು.

ಹಣ ಪಡೆಯುವುದು ಹೇಗೆ?:

ಬ್ಯಾಂಕ್‌ಗಳಲ್ಲಿ ನೀಡಲಾದ ಫಾರ್ಮ್‌ನಲ್ಲಿ ಹೆಸರು, ವಿಳಾಸ, ಸಹಿ, ದಿನಾಂಕ, ಯಾವ ನೋಟು ಮತ್ತು ಅದರ ಸಂಖ್ಯೆ ಇತ್ಯಾದಿಯನ್ನು ಭರ್ತಿ ಮಾಡಿ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಇತ್ಯಾದಿ ಯಾವುದಾದರೊಂದು ಗುರುತಿನ ಚೀಟಿಯ ಝೆರಾಕ್ಸ್ ಪ್ರತಿಯನ್ನು ಲಗತ್ತಿಸಿ ನೀಡಿದರೆ ಕನಿಷ್ಠ 4 ಸಾವಿರ ರೂ. ಪಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News