ಮೂಡುಬಿದಿರೆ: ಅಲ್‌ಕಾರ್ಗೋನಿಂದ 130 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

Update: 2016-11-10 11:59 GMT

ಮೂಡುಬಿದಿರೆ, ನ.10: ಅಲ್‌ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಮಹಾವೀರ ಕಾಲೇಜಿನ 130 ವಿದ್ಯಾರ್ಥಿಗಳಿಗೆ 3,99,500 ರೂ.ಗಳ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ಗುರುವಾರ ನಡೆಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಶಶಿಕಿರಣ್ ಶೆಟ್ಟಿಯವರ ಸರಳತೆ, ಸಾಮಾಜಿಕ ಬದ್ಧತೆ ಮಾದರಿಯಾದದ್ದು. ವಿದ್ಯಾರ್ಥಿಗಳು ಶಿಕ್ಷಣದ ನೈಜ ಪರಿಕಲ್ಪನೆ, ಸಾಮಾಜಿಕ ಬದ್ಧತೆಯಿರುವ ವ್ಯಕ್ತಿಗಳ ಉದ್ದೇಶವನ್ನು ಅರಿತು ಮುನ್ನಡೆಯುವ ಅನಿವಾರ್ಯತೆಯಿದೆ ಎಂದರು.

ಅಲ್‌ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸ್‌ನ ವ್ಯವಸ್ಥಾಪಕ ನಕ್ರೆ ಸುರೇಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಭಿವೃದ್ಧಿ ಪಥದಲ್ಲಿ ಶಿಕ್ಷಣ ಮುಂದುವರಿಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಂಸ್ಥೆ ವಿದ್ಯಾರ್ಥಿವೇತನ ನೀಡುತ್ತಿದೆ. ನೈಜ ತೊಂದರೆಯಿರುವ ವಿದ್ಯಾರ್ಥಿಗಳಿಗೆ ಸಂಸ್ಥೆ ಸ್ಪಂದಿಸುತ್ತದೆ. ಅನ್‌ಲೈನ್ ಪ್ರಕ್ರಿಯೆ ಮೂಲಕ ವಿದ್ಯಾರ್ಥಿವೇತನ ನೀಡುವ ಯೋಜನೆಯನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಅವಿಭಜಿತ ದ.ಕ. ಜಿಲ್ಲೆಯ 6 ತಾಲೂಕಿನಲ್ಲಿ ಸಂಸ್ಥೆಯು 94 ಸಂಸ್ಥೆಗಳ 1,606 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುಮಾರು 50 ಲಕ್ಷ ರೂ.ವರೆಗೆ ವಿದ್ಯಾರ್ಥಿವೇತನ ನೀಡುತ್ತಿದೆ. ಅದರಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 2,000, ಪಿಯುಸಿ ವಿದ್ಯಾರ್ಥಿಗಳಿಗೆ 3,500, ಡಿಗ್ರಿ ವಿದ್ಯಾರ್ಥಿಗಳಿಗೆ 4,000, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ 7,500, ಬಿ.ಎಡ್ ವಿದ್ಯಾರ್ಥಿಗಳಿಗೆ 8,000 ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 15,000 ರೂ. ವಿದ್ಯಾರ್ಥಿವೇತನ ನೀಡುತ್ತಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಬಾಲಕೃಷ್ಣ ಗಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿದ್ಯಾರ್ಥಿ ವೇತನದ ಚೆಕ್‌ಗಳನ್ನು ವಿತರಿಸಿದರು. ಆಳ್ವಾಸ್ ಪಿಯು ಕಾಲೇಜಿನ ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ ಸ್ವಾಗತಿಸಿದರು. ಕೌಶಲ್ ಕಾರ್ಯಕ್ರಮ ನಿರೂಪಿಸಿದರು. ಚೈತ್ರಾ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News