ಉಡುಪಿ: ಕನ್ನಡ ರಥಕ್ಕೆ ಸ್ವಾಗತ
ಉಡುಪಿ, ನ.10: ಕನ್ನಡ ನಾಡಿನ ಸಂಸ್ಕೃತಿ, ಶಿಲ್ಪಕಲೆಯನ್ನು ಪ್ರತಿಬಿಂಬಿಸುವ ಕನ್ನಡ ರಥಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ್ದು, ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ರಥವು ಇಂದು ಉಡುಪಿಗೆ ಆಗಮಿಸಿತು.
ನಗರದ ಜೋಡುಕಟ್ಟೆ ಬಳಿ ರಥವನ್ನು ಸ್ವಾಗತಿಸಿದ ಅಪರ ಜಿಲ್ಲಾಧಿಕಾರಿ ಅನುರಾಧಾ, ಜಿಲ್ಲಾಡಳಿತದ ವತಿಯಿಂದ ಭುವನೇಶ್ವರಿ ದೇವಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪದ ವಸಂತಿ ಶೆಟ್ಟಿ ಬ್ರಹ್ಮಾವರ, ರತ್ನಾವತಿ ಬೈಲೂರು, ಹಿರಿಯ ಸಾಹಿತಿ ರಾಮಭಟ್ಟ, ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಪುಷ್ಪಾರ್ಚನೆಗೈದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ., ತಹಶೀಲ್ದಾರ್ ಮಹೇಶ್ಚಂದ್ರ, ಆರ್‌ಎಫ್‌ಒ. ಕ್ಲಿಪರ್ಡ್ ಲೋಬೊ, ರೈತ ಮುಖಂಡರಾದ ವೀರಣ್ಣ ನಾ. ಕುರುವತ್ತಿ ಗೌಡರ್ ಮತ್ತಿತರರು ಉಪಸ್ಥಿತರಿದ್ದರು. ಪೌರಾಯುಕ್ತ ಮಂಜುನಾಥಯ್ಯ ಸ್ವಾಗತಿಸಿ, ವಂದಿಸಿದರು.
ಜೋಡುಕಟ್ಟೆಯಿಂದ ಬೋರ್ಡ್ ಹೈಸ್ಕೂಲ್‌ವರೆಗೆ ನಡೆದ ಮೆರವಣಿಗೆಯಲ್ಲಿ ಡೊಳ್ಳು ಮತ್ತು ಕಂಗೀಲು ನೃತ್ಯ ತಂಡಗಳು ಭಾಗವಹಿಸಿದ್ದವು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕೆಎಂಎಫ್ ವತಿಯಿಂದ ಲಸ್ಸಿ ವಿತರಿಸಲಾಯಿತು.