1000 ರೂ. ನೋಟಿಗೆ ಮಹಿಳೆ ಬಲಿ !
ಗೋರಖಪುರ, ನ.10: ಬ್ಯಾಂಕ್‌ಗಳು ರೂ. 1000ದ ನೋಟುಗಳನ್ನು ಸ್ವೀಕರಿಸುವುದಿಲ್ಲವೆಂಬ ಸುದ್ದಿ ತಿಳಿದು 40ರ ಹರೆಯದ ಮಹಿಳೆಯೊಬ್ಬಳು ಆಘಾತಕ್ಕೊಳಗಾಗಿ ಸಾವಿಗೀಡಾದ ಘಟನೆ ವರದಿಯಾಗಿದೆ.
ಈ ಘಟನೆ ಕುಶಿನಗರ ಜಿಲ್ಲೆಯ ಕ್ಯಾಪ್ಟನ್‌ಗಂಜ್ ತಹಸೀಲ್‌ನಲ್ಲಿ ನಡೆದಿದೆ. ತೀರ್ಥರಾಜಿ ಎಂಬ ಈ ಮಡಿವಾಳಗಿತ್ತಿಗೆ ಸರಕಾರ ರೂ. 500 ಹಾಗೂ 1000ದ ನೋಟುಗಳನ್ನು ರದ್ದುಗೊಳಿಸಿರುವುದು ಬ್ಯಾಂಕ್‌ಗೆ ಹೋದಾಗಲಷ್ಟೇ ತಿಳಿದು ಬಂದಿತ್ತು.
ರೂ. 1000ದ ನೋಟುಗಳು ಹಾಗೂ ಬ್ಯಾಂಕ್ ಪಾಸ್ ಬುಕ್‌ನೊಂದಿಗೆ ನೆಲದಲ್ಲಿ ಬಿದ್ದಿದ್ದ ಮಹಿಳೆಯ ಶವದ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತಾಡತೊಡಗಿದೆ.
ಈ ಮಹಿಳೆ ರೂ. 2 ಸಾವಿರ ಉಳಿತಾಯ ಮಾಡಿದ್ದಳು. ಆಕೆ ಆ ಹಣವನ್ನು ರೂ. 1000ದ ನೋಟುಗಳಿಗೆ ಬದಲಾಯಿಸಿಕೊಂಡಿದ್ದಳು.
ಮೃತ ಮಹಿಳೆಯ ಮನೆಗೆ ಭೇಟಿ ನೀಡುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಘಾತದಿಂದಲೇ ಆಕೆಯ ಮರಣ ಸಂಭವಿಸಿದೆಯೆಂಬುದು ಸಾಬೀತಾದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ದಂಡಾಧಿಕಾರಿ ಶಂಭು ಕುಮಾರ್ ತಿಳಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ, ತನ್ನ 8ರ ಹರೆಯದ ಮಗಳನ್ನು ಆಸ್ಪತ್ರೆಗೆ ಒಯ್ಯುತ್ತಿದ್ದ ವ್ಯಕ್ತಿಯೊಬ್ಬನಿಗೆ ರೂ. 1000ದ ನೋಟನ್ನು ಪೆಟ್ರೋಲ್ ಪಂಪಿನ ಸಿಬ್ಬಂದಿ ಪಡೆಯಲು ನಿರಾಕರಿಸಿದುದರಿಂದ ಪೆಟ್ರೋಲ್ ಸಿಗದೆ ಸಕಾಲದಲ್ಲಿ ಆಸ್ಪತ್ರೆ ತಲುಪಲು ಸಾಧ್ಯವಾಗದೆ ಬಾಲಕಿ ಮೃತಪಟ್ಟಳೆಂದು ಆರೋಪಿಸಲಾಗಿದೆ. ಈ ಘಟನೆ ಮಹುವಾ ಮಾಫಿ ಗ್ರಾಮದಲ್ಲಿ ನಡೆದಿದೆ.