2017ರ ಸೆ.17ರೊಳಗೆ ಸರಕಾರಕ್ಕೆ ವರದಿ ಸಲ್ಲಿಕೆ: ಎಚ್.ಡಿ. ಅಮರ್‌ನಾಥ್

Update: 2016-11-10 14:04 GMT

ಉಡುಪಿ, ನ. 10: ಒಂದು ತಿಂಗಳ ಹಿಂದೆ ರಚನೆಯಾಗಿರುವ ರಾಜ್ಯ ನಾಲ್ಕನೆ ಹಣಕಾಸು ಆಯೋಗವು ಈಗಾಗಲೇ 17 ಜಿಲ್ಲೆಗಳಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ. ಇದೀಗ ಉಡುಪಿ ಸೇರಿದಂತೆ ಮುಂದೆ ಎಲ್ಲ ಜಿಲ್ಲೆಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿ 2017ರ ಸೆ.17ರೊಳಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಆಯೋಗದ ಸದಸ್ಯ ಎಚ್.ಡಿ. ಅಮರ್ ನಾಥ್ ತಿಳಿಸಿದ್ದಾರೆ.

ರಾಜ್ಯ ನಾಲ್ಕನೆ ಹಣಕಾಸು ಆಯೋಗ ಇಂದು ಮಣಿಪಾಲದ ರಜತಾದ್ರಿಯಲ್ಲಿರುವ ಜಿಪಂ ಸಭಾಂಗಣದಲ್ಲಿ ಕರೆಯಲಾದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತನಿಧಿಗಳ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಆಯೋಗದ ಸದಸ್ಯ ಡಾ.ಎಚ್.ಶಶಿಧರ್ ಮಾತನಾಡಿ, ಪಂಚಾಯತ್ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಬಲವರ್ಧನೆಗೆ ಕಾರ್ಯಾಚರಣೆ, ಸಿಬ್ಬಂದಿ ವರ್ಗ, ಅನುದಾನ ಹಾಗೂ ಸ್ವಾತಂತ್ರ ಅತಿ ಮುಖ್ಯವಾಗಿದ್ದು, ಇವುಗಳ ಸುಧಾರಣೆಯ ಹಿನ್ನೆಲೆಯಲ್ಲಿ ಆಯೋಗ ಕಾರ್ಯಾಚರಿಸುತ್ತಿದೆ. ಆಡಳಿತ ಮತ್ತು ಅಧಿಕಾರಿ ವರ್ಗದ ನಡುವೆ ಸಂಘರ್ಷ ಉಂಟಾಗಬಾರದು. ಎಲ್ಲದಕ್ಕೂ ಕಾನೂನನ್ನೇ ಹೇರದೆ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು.

ಪಂಚಾಯತ್ ವ್ಯವಸ್ಥೆಯಲ್ಲಿರುವ ಅಸಮಾನತೆಯನ್ನು ನಿವಾರಿಸಲು ಆಯೋಗವು ಬದ್ಧವಾಗಿದೆ. ಈ ಹಿಂದಿನ ಮೂರನೆ ಹಣಕಾಸು ಆಯೋಗದ ವರದಿ ಉತ್ತಮವಾಗಿದ್ದರೂ ಅದರಲ್ಲಿನ ಕೆಲವು ಶಿಫಾರಸ್ಸುಗಳು ಇಂದಿಗೂ ಅನುಷ್ಠಾನಗೊಂಡಿಲ್ಲ ಎಂದು ಅವರು ತಿಳಿಸಿದರು.

ಸಿಬ್ಬಂದಿ ಕೊರತೆ ನೀಗಿಸಿ

ಉಡುಪಿ ಜಿಪಂ ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ, ಗ್ರಾಪಂಗಳಲ್ಲಿ ನೌಕರರ ಕೊರತೆ ಬಹಳ ದೊಡ್ಡ ಸಮಸ್ಯೆಯಾಗಿದ್ದು, ಪಿಡಿಒ, ಕಾರ್ಯದರ್ಶಿ, ಸಿಬಂದಿಗಳನ್ನು ನೇಮಿಸುವ ಕಾರ್ಯ ಅಗತ್ಯವಾಗಿ ಆಗಬೇಕು. ಜಿ.ಪಂ., ತಾ,ಪಂ,, ಗ್ರಾ.ಪಂ. ಸದಸ್ಯರ ಗೌರವ ಧನವನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು. ವಿದ್ಯುತ್ ಬಿಲ್ ಪಾವತಿಸಿದವರಿಗೆ ಎಸ್ಕ್ರೋ ಖಾತೆಯ ಹಣವನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಜಿ.ಪಂ. ರಸ್ತೆ ನಿರ್ವಹಣೆಗೆ ಅನುದಾನ ನೀಡುತ್ತಾರೆಯೇ ಹೊರತು ಅಭಿವೃದ್ಧಿಗೆ ಯಾವುದೇ ಹಣ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಜಿ.ಪಂ. ಅಧೀನದಲ್ಲಿರುವ ಇಲಾಖೆಗಳ ಪ್ರಗತಿ ಪರಿಶೀಲನೆಯ ಅಧಿಕಾರವನ್ನು ಜಿಪಂ ಅಧ್ಯಕ್ಷರಿಗೆ ನೀಡಬೇಕು. ಮರಳುಗಾರಿಕೆ ಅಧಿಕಾರವನ್ನು ಗ್ರಾಪಂಗಳಿಗೆ ವಹಿಸಿಕೊಡಬೇಕು ಎಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಬಾಬು ಶೆಟ್ಟಿ ತಿಳಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿನ ತ್ಯಾಜ್ಯಗಳ ವಿಲೇವಾರಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ. ಇದಕ್ಕೆ ನಿಗದಿ ಪಡಿಸಿರುವ ಅನುದಾನವನ್ನು ಸರಿಯಾಗಿ ವಿನಿ ಯೋಗಿಸುತ್ತಿಲ್ಲ ಎಂದು ಜಿಪಂ ಸದಸ್ಯೆ ಚಂದ್ರಿಕಾ ರಂಜನ್ ಕೇಳ್ಕರ್ ಸಭೆಗೆ ತಿಳಿಸಿದರು. ಗ್ರಾಪಂಗಳಲ್ಲಿ ಅಗತ್ಯವಿರುವ ಪಿಡಿಒ ಸೇರಿದಂತೆ ಸಿಬ್ಬಂದಿಯ ನೇಮಕವನ್ನು ಅತ್ಯಂತ ತುರ್ತುಗಿ ಮಾಡಬೇಕು ಎಂದು ಗ್ರಾಪಂ ಅಧ್ಯಕ್ಷರು ಸಭೆಯಲ್ಲಿ ಆಯೋಗವನ್ನು ಒತ್ತಾಯಿಸಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಆಯೋಗದ ಅಪರ ಕಾರ್ಯದರ್ಶಿ ಪ್ರಸನ್ನ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಜಾಫರ್, ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News