ಚುನಾವಣೆ ಗಮನದಲ್ಲಿರಿಸಿ ನೋಟು ರದ್ದತಿ: ಮುಲಾಯಂ
Update: 2016-11-10 20:02 IST
ಲಕ್ನೊ, ನ.10: ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿರಿಸಿ ದೊಡ್ಡ ಮುಖ ಬೆಲೆಯ ನೋಟುಗಳನ್ನು ರದ್ದುಗೊಳಿಸಲಾಗಿದೆ. ಇದು, ಎನ್‌ಡಿಎ ಸರಕಾರಕ್ಕೆ ಜನರ ಸಂಕಷ್ಟದ ಲಕ್ಷವಿಲ್ಲವೆಂಬುದನ್ನು ತೋರಿಸಿದೆಯೆಂದು ಸಮಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಇಂದು ಅರೋಪಿಸಿದ್ದಾರೆ.
ದೊಡ್ಡ ವೌಲ್ಯದ ನೋಟುಗಳ ಹಠಾತ್ ರದ್ದತಿ ಜನ ಸಾಮಾನ್ಯರಿಗೆ, ರೈತರಿಗೆ ಹಾಗೂ ಬಡವರಿಗೆ ಭಾರೀ ಸಂಕಷ್ಟ ಉಂಟು ಮಾಡಿದೆ. ಚುನಾವಣೆಗಳ ಮೇಲೆ ಕಣ್ಣಿರಿಸಿ ಸರಕಾರ ಇದನ್ನು ಮಾಡಿದೆಯೇ ಹೊರತು, ಬಡವರ ಬವಣೆಯನ್ನಲ್ಲವೆಂದು ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.
ಉತ್ತರಪ್ರದೇಶದ ಆಳುವ ಎಸ್ಪಿಯೂ ಚುನಾವಣೆಗಳಲ್ಲಿ ಕಪ್ಪು ಹಣದ ಬಳಕೆಯನ್ನು ವಿರೋಧಿಸಿತ್ತು. ಪಕ್ಷವು ಅದರ ವಿರುದ್ಧ ಹೋರಾಡಿತ್ತು. ಚುನಾವಣೆಗಳಲ್ಲಿ ಕಪ್ಪು ಹಣವನ್ನು ಬಳಸಲು ತಾವು ಬಯಸುವುದಿಲ್ಲವೆಂದು ಮುಲಾಯಂ ತಿಳಿಸಿದ್ದಾರೆ.
ಮದುವೆಯ ಋತುವನ್ನು ಅನುಲಕ್ಷಿಸಿ ನೋಟು ರದ್ದತಿ ನಿರ್ಧಾರವನ್ನು ಹಿಂಪಡೆಯುವಂತೆ ಅವರು ಆಗ್ರಹಿಸಿದ್ದಾರೆ.