ನೋಟು ಅಮಾನ್ಯ ವಿಷಯ ಬಿಜೆಪಿ, ಮಿತ್ರಪಕ್ಷಗಳಿಗೆ ಮೊದಲೇ ತಿಳಿದಿತ್ತು: ಕೇಜ್ರೀವಾಲ್ ಆರೋಪ

Update: 2016-11-10 14:51 GMT

ಹೊಸದಿಲ್ಲಿ, ನ.10: ಅಧಿಕ ಮೊತ್ತದ ನೋಟುಗಳನ್ನು ಅಮಾನ್ಯಗೊಳಿಸುವ ವಿಷಯವನ್ನು ಬಿಜೆಪಿ ಮತ್ತದರ ಮಿತ್ರಪಕ್ಷಗಳಿಗೆ ವಾರದ ಹಿಂದೆಯೇ ತಿಳಿಸಲಾಗಿತ್ತು ಮತ್ತು ಅವರು ಆಸ್ತಿ, ಚಿನ್ನ ಖರೀದಿಸುವ ಮೂಲಕ ಸುರಕ್ಷಿತರಾದರು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಆರೋಪಿಸಿದ್ದಾರೆ. ಮುಂಬರುವ ಉತ್ತರಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎನ್‌ಡಿಎ ಸರಕಾರ ಈ ನಿರ್ಧಾರ ಕೈಗೊಂಡಿದೆ . ಇದರಿಂದ ಬಡವರಿಗೆ ಭಾರೀ ಸಂಕಷ್ಟವಾಗಿದೆ ಎಂದ ಅವರು, 2000 ರೂ. ಮುಖಬೆಲೆಯ ನೋಟುಗಳನ್ನು ಜಾರಿಗೆ ತಂದಿರುವ ನಿರ್ಧಾರದ ಹಿಂದಿನ ತರ್ಕ ತಿಳಿಯುತ್ತಿಲ್ಲ. ಒಂದಂತೂ ಸತ್ಯ, 2000 ರೂ. ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದಿರುವುದರಿಂದ ಭ್ರಷ್ಟಾಚಾರಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಕಪ್ಪುಹಣದ ಪ್ರಮಾಣ ಇನ್ನಷ್ಟು ಹೆಚ್ಚಲಿದೆ. ಕಮಿಷನ್ ದಂಧೆ ನಡೆಸುವ ಒಂದು ಕೂಟ ವ್ಯವಹಾರ ದೇಶದಾದ್ಯಂತ ಪ್ರವರ್ದಮಾನಕ್ಕೆ ಬಂದಿದೆ . ಶೇ.15ರಿಂದ 20ರಷ್ಟು ಕಮಿಷನ್ ಪಡೆದು ನೋಟುಗಳನ್ನು ಬದಲಿಸಿ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇದಾಗಿದೆ ಎಂದು ವೀಡಿಯೊ ಸಂದೇಶದಲ್ಲಿ ಹೇಳಿದರು.

  ಪ್ರಚಾರಕ್ಕೆ ಪ್ರಧಾನಿ ಮೋದಿ ಚಿತ್ರ ಬಳಸಿಕೊಂಡಿರುವ ಪೇಟಿಎಂ ಸಂಸ್ಥೆಯ ಬಗ್ಗೆ ‘ಟ್ವಿಟರ್‌ನಲ್ಲಿ ’ಕಿಡಿಕಾರಿರುವ ಕೇಜ್ರೀವಾಲ್, ಈ ಸಂಸ್ಥೆ ನೋಟು ಅಮಾನ್ಯ ನಿರ್ಧಾರದ ಅಗ್ರ ಫಲಾನುಭವಿ ಎಂದು ಟೀಕಿಸಿದ್ದು, ಇದೆಲ್ಲಾ ಏನು ಪ್ರಧಾನಿಯವರೇ..? ಎಂದು ಪ್ರಶ್ನಿಸಿದ್ದಾರೆ.

ಆದರೆ ಕೇಜ್ರೀವಾಲ್ ಸಚಿವ ಸಂಪುಟದ ಸದಸ್ಯ ಸತ್ಯೇಂದ್ರ ಜೈನ್, ನೋಟು ಅಮಾನ್ಯಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಾಲನೆಗೆ ತಂದಿರುವುದು ಐತಿಹಾಸಿಕ ಕ್ರಮವಾಗಿದೆ. ಇದರಿಂದ ಭ್ರಷ್ಟಾಚಾರ ಮತ್ತು ಕಾಳಧನದ ದಂಧೆಗೆ ಕಡಿವಾಣ ಬೀಳಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

           

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News