ಉಡುಪಿ: ಶರೀಅತ್ ಕಾನೂನಿನಲ್ಲಿ ಹಸ್ತಕ್ಷೇಪ ವಿರೋಧಿಸಿ ಪ್ರತಿಭಟನೆ

Update: 2016-11-11 13:50 GMT

ಉಡುಪಿ, ನ.11: ಕೇಂದ್ರ ಸರಕಾರದ ಶರೀಅತ್ ಹಸ್ತಕ್ಷೇಪ ಹಾಗೂ ಸಮಾನ ನಾಗರಿಕ ಸಂಹಿತೆ ಜಾರಿ ವಿರೋಧಿಸಿ ಉಡುಪಿ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟವು ಶುಕ್ರವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಿತು.

ಉಡುಪಿ ಜಿಲ್ಲಾ ಖಾಝಿ ಅಲ್‌ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಮಾತನಾಡಿ, ಇಸ್ಲಾಮ್ ಧರ್ಮದಲ್ಲಿರುವ ತಲಾಕ್ ಕ್ರೂರವಾದ ವಿಧಿಯಲ್ಲ. ದಾಂಪತ್ಯದಲ್ಲಿ ಹೊಂದಾಣಿಯಾಗದೆ ಇದ್ದಾಗ ಪತಿ ಪತ್ನಿ ಇಬ್ಬರು ಕೂಡ ಪರಿಹಾರಕಂಡುಕೊಳ್ಳುವ ಮಾರ್ಗವಾಗಿದೆ. ಇಸ್ಲಾಮಿನ್ ಶರೀಯತ್ ಕಾನೂನನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ ಎಂದರು.

ಇಸ್ಲಾಮ್ ಧರ್ಮದಲ್ಲಿರುವ ವಿದ್ವಾಂಸ ಅಭಿಪ್ರಾಯವನ್ನು ಪಡೆದುಕೊಳ್ಳದೆ ಕಾನೂನು ಜಾರಿಗೊಳಿಸಿದರೆ ಅದರಲ್ಲಿ ದೋಷ ಕಂಡುಬರುತ್ತದೆ. ಮೊದಲು ಸರಕಾರ ಇಸ್ಲಾಮ್ ವಿದ್ವಾಂಸರ ಅಭಿಪ್ರಾಯವನ್ನು ಪಡೆದುಕೊಳ್ಳುವ ಕಾರ್ಯ ಮಾಡಬೇಕು. ಶರೀಯತ್ ಕಾನೂನಿನಲ್ಲಿ ಯಾವುದೇ ಬದಲಾವಣೆ ತರಲು ನಾವು ಬಿಡುವುದಿಲ್ಲ ಎಂದು ಅವರು ಹೇಳಿದರು.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಎನ್.ಕೆ. ಎಂ.ಶಾಫಿ ಸಅದಿ ಮಾತನಾಡಿ, ಸಮಾನ ನಾಗರಿಕ ಸಂಹಿತೆಯು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ. ಶರೀಯತ್ ಕಾನೂನಿನಲ್ಲಿ ಸರಕಾರ ಹಸ್ತಕ್ಷೇಪ ಮಾಡಿದರೆ ಅದು ಮುಸ್ಲಿಮರ ಧಾರ್ಮಿಕ ಸ್ವಾತಂತ್ರದ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದರು.

ಅಸಯ್ಯದ್ ಕೋಟೇಶ್ವರ ತಂಙಳ್, ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ತೌಫಿಕ್ ಅಬ್ದುಲ್ಲಾ, ಒಕ್ಕೂಟದ ಅಧ್ಯಕ್ಷ ಅಬ್ದುರ್ರಹ್ಮಾನ್ ಮದನಿ, ಪ್ರತಿಭಟನಾ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ನೇಜಾರು, ಅಹ್ಮದ್ ಮುಸ್ಲಿಯಾರ್ ಕಾಪು, ಸಲೀಂ ಮದನಿ ಕುತ್ತಾರು ಉಪಸ್ಥಿತರಿದ್ದರು.

ನ್ಯಾಯವಾದಿ ಹಂಝತ್ ಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಸೆಸ್ಸೆಫ್  ಜಿಲ್ಲಾಧ್ಯಕ್ಷ ಅಶ್ರಫ್ ಅಂಜದಿ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News