ಮಲ್ಪೆಯಲ್ಲಿ ಜನಮನ ರಂಜಿಸಿದ ಗಾನಯಾನ

Update: 2016-11-11 14:37 GMT

ಉಡುಪಿ, ನ.11: ಕರ್ನಾಟಕ ಏಕೀಕರಣ ವಜ್ರಮಹೋತ್ಸವ ಸಂಭ್ರಮದ ಅಂಗವಾಗಿ ಮಲ್ಪೆ ಕಡಲ ಕಿನಾರೆಯಲ್ಲಿ ಗುರುವಾರ ಸಂಜೆ ‘ಗಾನಯಾನ’ ಹಳೆಯ ಮಧುರ ಗೀತೆಗಳ ಗಾಯನ ಕಾರ್ಯಕ್ರಮವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿತ್ತು.

ಬೆಂಗಳೂರಿನ ಸರಸ್ ಕಮ್ಯೂನಿಕೇಶನ್ ತಂಡದ ಗಾಯಕರುಗಳಾದ ಸುನೀತಾ, ಮಂಗಳಾ ರವಿ, ವಿನಾಯಕ್ ನಾಡಿಗ್, ಮೋಹನ್ ಮತ್ತು ಬಳಗ ದವರು ನಡೆಸಿಕೊಟ್ಟ ‘ಗಾನಯಾನ’ ಕಾರ್ಯಕ್ರಮ ‘ಕನ್ನಡ ನಾಡು-ನುಡಿ’, ‘ನೆಲ-ಜಲ’ದೊಂದಿಗೆ ಚಲನಚಿತ್ರದ ಇತಿಹಾಸವನ್ನು ಕೇಳುಗರಿಗೆ ನೆನಪಿಸಿತು.

ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ರಿಧಂಪ್ಯಾಡ್ ಬಾರಿಸುವ ಮೂಲಕ ಚಾಲನೆ ನೀಡಿದರು. ರಾಷ್ಟ್ರಕವಿ ಕುವೆಂಪು ಅವರ ‘ಜೈ ಭಾರತ ಜನನಿಯ ತನುಜಾತೆ’ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಮುಂದೆ ‘ನಾವಾಡುವ ನುಡಿಯೇ ಕನ್ನಡ ನುಡಿ’, ‘ಕೇಳಿಸದೇ ಕಲ್ಲುಕಲ್ಲಿನಲಿ ಕನ್ನಡ ನುಡಿ’, ‘ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ’, ‘ಬಾ ತಾಯಿ ಭಾರತಿಯೇ’, ‘ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ’, ‘ಇಳಿದು ಬಾ ತಾಯೇ ಇಳಿದು ಬಾ’, ‘ಬಾನಲ್ಲೂ ನೀನೆ ಭುವಿಯಲ್ಲೂ ನೀನೇ’, ‘ಗಗನವು ಎಲ್ಲೋ ಭೂಮಿಯು ಎಲ್ಲೋ’, ‘ಭಾರತ ಭೂಷಿರ ಮಂದಿರ ಸುಂದರಿ’, ‘ಗಿಲ ಗಿಲ ಗಿಲ ಗಿಲಕ್ಕು ಕಾಲುಗೆಜ್ಜೆ ಝಲಕ್ಕು’, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’, ‘ಒಲವೇ ಜೀವನ ಸಾಕ್ಷಾತ್ಕಾರ’, ‘ಹಾವಿನ ದ್ವೇಷ ಹನ್ನೆರಡು ವರುಷ’, ‘ನಗುವ ನಯನ ಮಧುರ ವೌನ’, ‘ಇದೇ ನಾಡು ಇದೇ ಭಾಷೆ’, ‘ದೋಣಿ ಸಾಗಲಿ ಮುಂದೆ ಹೋಗಲಿ’ ಗೀತೆಗಳನ್ನು ಹಾಡಿದರು.

‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’ ಗೀತೆಯೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು. ಸಂಧ್ಯಾ ಎಸ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರತಿಯೊಂದು ಗೀತೆಗಳ ಗಾಯನದ ಮೊದಲು, ಗೀತೆಗಳ ಗೀತ ರಚನೆಕಾರರು, ಸಂಗೀತ ನಿರ್ದೇಶಕರು, ಗೀತೆಯಲ್ಲಿನ ನಟರು, ಚಲನಚಿತ್ರದ ಹೆಸರು ಮುಂತಾದ ವಿವರಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News