ಕಾವೂರಿನಲ್ಲಿ ಮುಸ್ತಫಾ ಅಂತ್ಯಕ್ರಿಯೆ

Update: 2016-11-11 16:34 GMT

ಮಂಗಳೂರು,ನ.11: ಮೂಡಬಿದ್ರೆಯ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಮೈಸೂರಿನ ಜೈಲಿನಲ್ಲಿದ್ದ ಕಾವೂರು ಶಾಂತಿನಗರದ ನಿವಾಸಿ ಮುಸ್ತಫಾ ಎಂಬವರ ಮೃತದೇಹ ಇಂದು ಬೆಳಗ್ಗೆ ಕಾವೂರಿಗೆ ತಲುಪಿದ್ದು, ಅಂತ್ಯಕ್ರಿಯೆ ನೆರವೇರಿದೆ.

ಜೈಲಿನಲ್ಲಿ ಗುರುವಾರ ಹತ್ಯೆಯಾದ ಮುಸ್ತಫಾರನ್ನು ಅಂದು ಮೈಸೂರಿನ ಕೆಆರ್.ಎಸ್. ಆಸ್ಪತ್ರೆಗೆ ಕರೆತಂದು ರಾತ್ರಿ ಸುಮಾರು 3 ಗಂಟೆ ಹೊತ್ತಿಗೆ ಮೃತದೇಹದ ಪೋಸ್ಟ್‌ಮಾರ್ಟಂ ನಡೆಸಲಾಗಿತ್ತು. ಶವಾಗಾರಕ್ಕೆ ಮೈಸೂರು ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಭೇಟಿ ನೀಡಿದ ಸಂದರ್ಭದಲ್ಲಿ ಮುಸ್ತಫಾ ಅವರ ಸಹೋದರ ತ್ವಾಹುಲ್ ಇಬ್ರಾಹೀಂ ಅವರು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು.

ಬಳಿಕ ಮೈಸೂರು ಪಿಎಫ್‌ಐ ಜಿಲ್ಲಾಧ್ಯಕ್ಷ ಫಾರೂಕ್ ಮೈಸೂರು, ರಾಜ್ಯ ಸಮಿತಿಯ ಶರೀಫ್ ಕೊಡಾಜೆ, ಅಬ್ದುಲ್ ಖಾದರ್, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಉಪಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ ಮೊದಲಾದವರ ನಿಯೋಗವು ಆಯುಕ್ತರಿಗೆ ಮನವಿ ಸಲ್ಲಿಸಿ, ಪ್ರಕರಣದಲ್ಲಿ ಆರೋಪಿ ಕಿರಣ್ ಶೆಟ್ಟಿ ಅವರೊಂದಿಗೆ ಇತರರೂ ಭಾಗಿಯಾಗಿದ್ದು, ಕೂಲಂಕುಶ ತನಿಖೆ ನಡೆಸುವಂತೆ ಹಾಗೂ ಹತ್ಯೆಯ ಹಿಂದಿನ ಷಡ್ಯಂತರವನ್ನು ಬಯಲಿಗೆಳೆಯುವಂತೆ ಆಗ್ರಹಿಸಿದೆ.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕಣ್ಣೂರಿಗೆ ತಲುಪಿದ ಮೃತದೇಹವನ್ನು ಕಣ್ಣೂರು ಕೇಂದ್ರ ಜುಮಾ ಮಸೀದಿಯಲ್ಲಿ ಸ್ನಾನ ಮಾಡಿಸಿ ಬೆಳಗ್ಗೆ 10 ಗಂಟೆಗೆ ಕಾವೂರು ಶಾಂತಿನಗರದ ಮುಸ್ತಫಾ ಅವರ ಮನೆಗೆ ತರಲಾಯಿತು. ಅಲ್ಲಿ ನೆರೆದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿ ಮೃತದೇಹವನ್ನು ಸುಮಾರು 11 ಗಂಟೆ ಹೊತ್ತಿಗೆ ಕೂಳೂರಿನ ಕೇಂದ್ರ ಜುಮಾ ಮಸೀದಿಯಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪಾಪ್ಯುಲರ್ ಫ್ರಂಟ್‌ನ ರಾಜ್ಯಾಧ್ಯಕ್ಷ ಕೆ.ಎಂ.ಶರೀಫ್, ಯಾಸಿರ್ ಹಸನ್ ಮೃತರ ಮನೆಗೆ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News