×
Ad

ಕೇರಳ ಮಾನವ ಹಕ್ಕು ಆಯೋಗದಿಂದ ತನಿಖೆಗೆ ಆದೇಶ

Update: 2016-11-12 00:23 IST

ಸುಳ್ಯ, ನ.11: ಕಾಸರಗೋಡಿನ ಪ್ರಥಮ ದರ್ಜೆ ನ್ಯಾಯಾಧೀಶ ವಿ.ಕೆ.ಉಣ್ಣಿಕೃಷ್ಣನ್ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಲು ಕೇರಳ ಮಾನವ ಹಕ್ಕು ಆಯೋಗ ನಿರ್ಧರಿಸಿದ್ದು, ಮಾಧ್ಯಮ ಗಳಲ್ಲಿ ಬಂದ ಸುದ್ದಿಯನ್ನು ಆಧರಿಸಿ ಸ್ವಯಂ ಪ್ರಕರಣ ದಾಖಲಿಸಿಕೊಂಡಿದೆ.

ಸುಳ್ಯದಲ್ಲಿ ಆಟೊ ಚಾಲಕನ ಮೇಲೆ ನಡೆದ ಹಲ್ಲೆಯ ಬಳಿಕ ಪೊಲೀಸರು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಉಣ್ಣಿಕೃಷ್ಣನ್ ಕಾಸರಗೋಡು ಸರ್ಕಲ್ ಇನ್‌ಸ್ಪೆಕ್ಟರ್‌ಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ. ಬುಧವಾರ ಬೆಳಗ್ಗೆ ಅವರು ತಮ್ಮ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದರು. ಪ್ರಕರಣದ ಬಗ್ಗೆ ಮೂರು ವಾರದೊಳಗೆ ವರದಿ ನೀಡುವಂತೆ ಕೇರಳದ ಮಾನವ ಹಕ್ಕು ಆಯೋಗದ ಅಧ್ಯಕ್ಷ ಪಿ.ಮೋಹನ್‌ದಾಸ್ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದರು. ಅದರಂತೆ ಕಾಸರಗೋಡು ಪೊಲೀಸರು ಪ್ರಕರಣದ ಬಗ್ಗೆ ತನಿಖೆಗಾಗಿ ಸುಳ್ಯಕ್ಕೆ ಆಗಮಿಸಿದ್ದಾರೆ. ಈ ಮಧ್ಯೆ ಉಣ್ಣಿಕೃಷ್ಣನ್ ಸಾವಿನ ಹಿಂದೆ ಒಳಸಂಚು ನಡೆಸಲಾಗಿದೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ.
ಸ್ವಪ್ರಯತ್ನದಿಂದ ನ್ಯಾಯಾಧೀಶ ಹುದ್ದೆಗೆ ಏರಿದ ಪ.ಜಾ.ಗೆ ಸೇರಿದ ಉಣ್ಣಿಕೃಷ್ಣನ್ ಎಲ್‌ಎಲ್‌ಬಿ ಹಾಗೂ ಎಲ್‌ಎಲ್‌ಎಂನಲ್ಲಿ ರ್ಯಾಂಕ್ ವಿಜೇತರಾಗಿದ್ದು, ಪ.ಜಾತಿಗಿರುವ ಸೌಲಭ್ಯ ಪಡೆಯದೆ ಮ್ಯಾಜಿಸ್ಟ್ರೇಟ್ ಪರೀಕ್ಷೆಯಲ್ಲಿ ಹತ್ತನೆ ರ್ಯಾಂಕ್ ಪಡೆದು ಉದ್ಯೋಗಕ್ಕೆ ಆಯ್ಕೆಯಾಗಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News