ನ.14ರವರೆಗೆ ಟೋಲ್ ಶುಲ್ಕ ಇಲ್ಲ
ಹೊಸದಿಲ್ಲಿ, ನ.11: 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ಕರೆನ್ಸಿ ನೋಟುಗಳು ಅಮಾನ್ಯಗೊಂಡಿರುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ಸಮಸ್ಯೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನವೆಂಬರ್ 14ರ ಮಧ್ಯರಾತ್ರಿಯವರೆಗೂ ಯಾವುದೇ ಟೋಲ್ ಶುಲ್ಕ ವಿಧಿಸಲಾಗುವುದಿಲ್ಲವೆಂದು ಕೇಂದ್ರ ಸರಕಾರ ಶುಕ್ರವಾರ ಘೋಷಿಸಿದೆ.
ಈ ಮೊದಲು ನವೆಂಬರ್ 9ರಂದು, ಕೇಂದ್ರ ಸರಕಾರವು ನೀಡಿದ ಪ್ರಕಟಣೆಯೊಂದರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನವೆಂಬರ್ 11ರ ಮಧ್ಯರಾತ್ರಿಯವರೆಗೂ ಟೋಲ್‌ಗೇಟ್‌ಗಳಲ್ಲಿ ಶುಲ್ಕವನ್ನು ವಿಧಿಸಲಾಗುವುದಿಲ್ಲವೆಂದು ತಿಳಿಸಿತ್ತು. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಟೋಲ್ ಶುಲ್ಕ ಅಮಾನತಿನ ಅವಧಿಯನ್ನು ನವೆಂಬರ್ 14ರ ಮಧ್ಯರಾತ್ರಿಯವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ತಿಳಿಸಿದ್ದಾರೆ.ಪ್ರಸಕ್ತ ಪರಿಸ್ಥಿತಿಯನ್ನು ಪರಾಮರ್ಶಿಸಿ, ಟೋಲ್ ಸಂಗ್ರಹವನ್ನು ಅಮಾನತಿನಲ್ಲಿಡಲು ನಿರ್ಧರಿಸಲಾಗಿದೆಯೆಂದು ಸಚಿವರು ಹೇಳಿದ್ದಾರೆ. ಟೋಲ್ ಶುಲ್ಕ ಸಂಗ್ರಹಿಸದೆ ಇರುವುದರಿಂದ ಉಂಟಾಗುವ ನಷ್ಟವನ್ನು ಸರಕಾರವು ಭರಿಸಿಕೊಳ್ಳಲು ತಯಾರಿದೆಯೆಂದು ಗಡ್ಕರಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಆಮಾನ್ಯಗೊಳಿಸುವುದಾಗಿ ಘೋಷಿಸಿದ ಬಳಿಕ ಚಿಲ್ಲರೆಯ ಸಮಸ್ಯೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಟೋಲ್‌ಗೇಟ್‌ಗಳಲ್ಲಿ ಗೊಂದಲದ ವಾತಾವರಣವುಂಟಾಗಿ, ಟ್ರಾಫಿಕ್ ಜಾಮ್ ಆಗಿತ್ತು. ಹಲವೆಡೆ ವಾಹನ ಸವಾರರು ಹಾಗೂ ಟೋಲ್‌ಗೇಟ್ ಸಿಬ್ಬಂದಿಯ ನಡುವೆ ವಾಗ್ವಾದಕ್ಕೂ ಕಾರಣವಾಗಿತ್ತು.