500, 1000 ರೂಪಾಯಿ ರದ್ದು, 15 ದಿನ ಮೊದಲೇ ಸುದ್ದಿ ಪ್ರಕಟಿಸಿದ್ದ ಪತ್ರಕರ್ತ!
ಲಕ್ನೋ, ನ.12: 500 ಹಾಗೂ 1000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ವಾಪಸು ಪಡೆಯುವ ನಿರ್ಧಾರ ಬೆರಳಣಿಕೆ ಮಂದಿಗಷ್ಟೇ ಗೊತ್ತಿತ್ತು ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆಯಾದರೂ, ಕಾನ್ಪುರ ಮೂಲದ ಹಿಂದಿ ಪತ್ರಕರ್ತರೊಬ್ಬರು, ಈ ಬಗ್ಗೆ 15 ದಿನಗಳ ಮುನ್ನವೇ ಸುದ್ದಿ ಪ್ರಕಟಿಸಿದ್ದರು ಎನ್ನುವ ಅಂಶ ಇದೀಗ ಬಹಿರಂಗವಾಗಿದೆ.
ದೈನಿಕ್ ಜಾಗರಣ್ ಪತ್ರಿಕೆಯ ಪತ್ರಕರ್ತ ಬ್ರಿಜೇಶ್ ದುಬೆ ಅವರು, ವಿಶ್ವಾಸನೀಯ ಮೂಲಗಳನ್ನು ಉಲ್ಲೇಖಿಸಿ ಪ್ರಕಟಿಸಿದ ವಿಶೇಷ ವರದಿ ಅಕ್ಟೋಬರ್ 27ರಂದೇ ಪ್ರಕಟವಾಗಿತ್ತು. ಇದರ ಬದಲಾಗಿ 2000 ರೂಪಾಯಿ ನೋಟುಗಳನ್ನು ಚಲಾವಣೆಗೆ ತರಲಾಗುತ್ತಿದೆ ಎಂದೂ ಅವರು ವರದಿಯಲ್ಲಿ ಸ್ಪಷ್ಟಪಡಿಸಿದ್ದರು. ಇದೀಗ ಅವರನ್ನು ಅಭಿನಂದಿಸಿ ಬಹಳಷ್ಟು ದೂರವಾಣಿ ಕರೆಗಳು ಬರುತ್ತಿವೆ.
ಪತ್ರಿಕೆಯ ಬ್ಯುಸಿನೆಸ್ ವಿಭಾಗವನ್ನು ನೋಡಿಕೊಳ್ಳುತ್ತಿರುವ ಅವರು, ಪತ್ರಿಕೋದ್ಯಮದ ಸಂಹಿತೆ ಅನ್ವಯ ಮೂಲವನ್ನು ಬಿಟ್ಟುಕೊಡಲು ನಿರಾಕರಿಸಿದ್ದು, ದೀರ್ಘಕಾಲದ ಹಾಗೂ ಸೂಕ್ತ ಮಾಹಿತಿ ಹೊಂದಿದ್ದ ಮೂಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ನವೆಂಬರ್ 8ರಂದು ಪ್ರಧಾನಿ ಮೋದಿ "ಕಪ್ಪುಹಣದ ವಿರುದ್ಧ ಸರ್ಜಿಕಲ್ ದಾಳಿ" ನಡೆಸುವವರೆಗೂ ಈ ವರದಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ತಮ್ಮ ಬೈಲೈನ್ ದೇಶಾದ್ಯಂತ ಪ್ರಚಾರಕ್ಕೆ ಬಂದಿರುವ ಬಗ್ಗೆ ದುಬೆ ಸಂತಸ ವ್ಯಕ್ತಪಡಿಸಿದ್ದಾರೆ.