ಮೋದಿ ವಿರುದ್ಧ ಉದ್ಧವ್ ಠಾಕ್ರೆ ಸರ್ಜಿಕಲ್ ದಾಳಿ !
ಮುಂಬೈ, ನ.12 : ಕೇಂದ್ರ ಸರಕಾರವು 500 ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿದಂದಿನಿಂದ ಜನಸಾಮಾನ್ಯರಿಗಾಗುತ್ತಿರುವ ತೊಂದರೆಯನ್ನೇ ಬಂಡವಾಳವಾಗಿಸಿಕೊಂಡ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಸರಕಾರದ ಈ ಕ್ರಮ ಜನರಿಗೆ ಹಿಂಸೆಯಾಗಿದೆಯೆಂದು ಹೇಳಿದರಲ್ಲದೆ ಪ್ರಧಾನಿಗೆ ಧೈರ್ಯವಿದ್ದರೆ ಕಪ್ಪು ಹಣವನ್ನು ದೇಶಕ್ಕೆ ಹಿಂದಕ್ಕೆ ತರಲು ಸ್ವಿಸ್ ಬ್ಯಾಂಕುಗಳ ಮೇಲೆ `ಸರ್ಜಿಕಲ್ ದಾಳಿ' ನಡೆಸಬೇಕೆಂದರು.
``ಜನರು ನಿಮ್ಮ (ಪ್ರಧಾನಿ) ಮೇಲೆ ಬಹಳ ನಂಬಿಕೆಯಿರಿಸಿದ್ದಾರೆ, ಅದನ್ನು ನೀವು ಸುಳ್ಳಾಗಿಸಿದರೆ ಜನರು ನಿಮ್ಮ ವಿರುದ್ಧ ನಡೆಸುವ ಸರ್ಜಿಕಲ್ ದಾಳಿಯ ಅನುಭವ ನಿಮಗಾಗುವುದು,'' ಎಂದು ಅವರು ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
``ನಿಮ್ಮ ಕ್ರಮ ಭ್ರಷ್ಟಾಚಾರದ ವಿರುದ್ಧವೆಂದಾದರೆ ನಾವು ನಿಮ್ಮ ಜತೆಗಿದ್ದೇವೆ ಆದರೆ ಜನಸಾಮಾನ್ಯನಿಗೆ ತೊಂದರೆಯಾಗಬಾರದು. ನೋಟುಗಳು ಕೂಡ ಸಾಕಷ್ಟು ಲಭ್ಯವಿಲ್ಲದೇ ಇರುವುದರಿಂದ ನಿಮ್ಮ ಹಠಾತ್ ನಿರ್ಧಾರದಿಂದ ಜನರು ಸಂಕಷ್ಟಕ್ಕೀಡಾಗುವಂತೆ ಮಾಡಿದೆ,''ಎಂದು ಉದ್ಧವ್ ಹೇಳಿದರು.
ರದ್ದಾದ ನೋಟುಗಳನ್ನು ಬ್ಯಾಂಕುಗಳು ಹಿಂದಕ್ಕೆ ಪಡೆಯುವ ಕೊನೆಯ ದಿನಾಂಕವನ್ನು ಮುಂದೂಡುವಂತೆ ಉದ್ಧವ್ ಸರಕಾರವನ್ನು ಆಗ್ರಹಿಸಿದರು.
ಜನರ ಆಕ್ರೋಶದ ಪರಿಣಾಮವೇನಾಗುವುದೆಂದು ಸರಕಾರ ಅರಿಯಬೇಕು, ಎಂದವರು ಹೇಳಿದರು.