ಎಟಿಎಂನಲ್ಲಿದ್ದ ಅನಾಮಧೇಯ ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕ ಮೆರೆದ ಆಸ್ಪತ್ರೆ ಸಿಬ್ಬಂದಿ
ಬಂಟ್ವಾಳ, ನ.12: ಇದೀಗ ದೇಶಾದ್ಯಂತ ಹಣದ್ದೇ ಚರ್ಚೆ. ತಮ್ಮಲ್ಲಿರುವ ಹಳೆ ನೋಟುಗಳನ್ನು ಬದಲಾಯಿಸಲು ಅಥವಾ ಜಮೆ ಮಾಡಲು ಬ್ಯಾಂಕ್ ನಲ್ಲಿ ಮುಗಿಬೀಳುತ್ತಿರುವ ಗ್ರಾಹಕರು. ಖರ್ಚಿಗಾಗಿ ಹಣ ಡ್ರಾ ಮಾಡಲು ಬಿಸಿಲನ್ನು ಲೆಕ್ಕಿಸದೆ ಎಟಿಎಂ ಮುಂದೆ ಸರತಿ ಸಾಲುಗಳು. ಇವೆಲ್ಲದರ ನಡುವೆ ಎಟಿಎಂ ಯಂತ್ರದಲ್ಲಿ ಹೊರಬಂದು ಉಳಿದಿದ್ದ ಗ್ರಾಹಕರೊಬ್ಬರ ಹಣವನ್ನು ಪೊಲೀಸರ ಮೂಲಕ ಹಣದ ಮಾಲಕನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆಯೊಂದು ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಡೆದಿದೆ.
ವಾರದ ಹಿಂದೆ ತುಂಬೆ ನಿವಾಸಿ ಟಿ.ಹಕೀಂ ಎಂಬವರು ಹಣ ಡ್ರಾ ಮಾಡಲೆಂದು ತುಂಬೆಯ ಫಾತಿಮಾ ಟವರ್ ನಲ್ಲಿರುವ ಇಂಡಿಕ್ಯಾಶ್ ಎಟಿಎಂಗೆ ತೆರಳಿದ್ದರು. ವಾಸ್ತವದಲ್ಲಿ ಹಕೀಂ ಅವರ ಖಾತೆ ತುಂಬೆ ಕಾರ್ಪೋರೇಶನ್ ಬ್ಯಾಂಕ್ ನಲ್ಲಿತ್ತು. ಕಾರ್ಪೋರೇಶನ್ ಎಟಿಎಂ ದುರಸ್ಥಿಯಲ್ಲಿದ್ದ ಕಾರಣ ಹಣ ಡ್ರಾ ಮಾಡಲು ಅವರು ಇಂಡಿಕ್ಯಾಶ್ ಎಟಿಎಂಗೆ ತೆರಳಿದ್ದರು. ತನ್ನಲ್ಲಿದ್ದ ಎಟಿಎಂ ಕಾರ್ಡನ್ನು ಎಟಿಎಂ ಯಂತ್ರಕ್ಕೆ ಹಾಕಿ ರಹಸ್ಯ ಸಂಖ್ಯೆಯನ್ನು ಒತ್ತಿದ ಬಳಿಕ ಹಣ ಡ್ರಾ ಮಾಡಲೆಂದು 10 ಸಾವಿರ ಒತ್ತಿದ್ದರು. ಈ ಕ್ಷಣದಲ್ಲೇ ವಿದ್ಯುತ್ ಕಡಿತಗೊಂಡು ಎಟಿಎಂ ಯಂತ್ರ ಆಫ್ ಆಗಿತ್ತು. ಈ ಸಂದರ್ಭದಲ್ಲಿ ಏನು ಮಾಡುವುದೆಂದು ತೋಚದ ಹಕೀಂ ಕೆಲ ಹೊತ್ತು ಅಲ್ಲೇ ನಿಂತರೂ ವಿದ್ಯುತ್ ಬಂದಿರಲಿಲ್ಲ. ಕಾದು ಸುಸ್ತಾದ ಅವರು ಕ್ಯಾನ್ಸಲ್ ಗುಂಡಿಯನ್ನು ಒತ್ತಿ ಎಟಿಎಂನಿಂದ ವಾಪಸ್ ಹೋಗಿದ್ದರು.
ಇದಾದ ಕೆಲ ಹೊತ್ತಿನ ಬಳಿಕ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ಸಿಬ್ಬಂದಿ ಜೆನಿಟ ಮೀನಾ ಡಿಕುನ್ನ ಎಂಬವರು ಇಂಡಿಕ್ಯಾಶ್ ಎಟಿಎಂಗೆ ಹೋದಾಗ ಒಂದಿಷ್ಟು ಹಣ ಎಟಿಎಂ ಯಂತ್ರದಿಂದ ಹೊರ ಬಂದು ನಿಂತಿತ್ತು. ಅದನ್ನು ಸ್ವೀಕರಿಸಿದ ಅವರು ಬಳಿಕ ತನ್ನ ಎಟಿಎಂನಿಂದ ಹಣ ಡ್ರಾ ಮಾಡಿ ನೇರವಾಗಿ ತುಂಬೆಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಗೆ ತೆರಳಿ ಎಟಿಎಂನಲ್ಲಿ ದೊರೆತಿದ್ದ ಹಣವನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕಿರಣ್ ಶೆಟ್ಟಿಯವರಲ್ಲಿ ನೀಡಿ ವಿಷಯ ತಿಳಿಸಿ ಮಂಗಳೂರಿಗೆ ಹೊರಟಿದ್ದರು.
ಡಾ. ಕಿರಣ್ ಶೆಟ್ಟಿಯವರು ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಜೈಸನ್ ಎಂಬವರನ್ನು ಕರೆದು ನಡೆದ ಘಟನೆಯಲ್ಲಿ ತಿಳಿಸಿ ಕೂಡಲೇ ಈ ಹಣವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ತಲುಪಿಸುವಂತೆ ಸೂಚಿಸಿದ್ದರು. ಅದರಂತೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ಬಂದ ಜೈಸನ್ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ಗೌಡ ಅವರಲ್ಲಿ ಈ ಹಣವನ್ನು ಕೊಟ್ಟು ವಿಷಯ ತಿಳಿಸಿದ್ದರು. ಈ ಮಧ್ಯೆ ಪಿಕಪ್ ಒಳದರಲ್ಲಿ ಚಾಲಕನಾಗಿ ದುಡಿಯುತ್ತಿರುವ ಹಕೀಂ ಹತ್ತು ಸಾವಿರ ರೂ. ಕಳೆದುಕೊಂಡ ಬಗ್ಗೆ ಚಿಂತಾಗ್ರಸ್ತರಾಗಿ ಈ ವಿಷಯವನ್ನು ಎಟಿಎಂ ಇರುವ ಕಟ್ಟಡದ ಮಾಲಕರಿಗೆ ಹಾಗೂ ಕಾರ್ಪೋರೇಶನ್ ಬ್ಯಾಂಕ್ ನಲ್ಲಿ ವಿಷಯ ತಿಳಿಸಿದ್ದರು. ಎಸ್ಸೈ ರಕ್ಷಿತ್ ನವರ ನಿದೇರ್ಶನದಂತೆ ಸಿಬ್ಬಂದಿ ಜನಾರ್ದನ್ ಈ ತುಂಬೆಗೆ ಬಂದು ಪರೀಶೀಲನೆ ನಡೆಸಿದಾಗ ಎಟಿಎಂನಲ್ಲಿ ಸಿಕ್ಕಿರುವ ಹಣ ತುಂಬೆಯ ಹಕೀಂ ಎಂಬವರದ್ದು ಎಂದು ತಿಳಿದು ಬಂದಿತ್ತು.
ಅದರಂತೆ ಎಸ್ಸೈ ರಕ್ಷಿತ್ ಅವರು ಹಕೀಂ ಅವರಿಗೆ ಫೋನ್ ಕರೆ ಮಾಡಿ ತಮ್ಮ ಹಣ ಠಾಣೆಯಲ್ಲಿದ್ದು ಬ್ಯಾಂಕ್ ದಾಖಲೆಗಳೊಂದಿಗೆ ಬಂದು ಸ್ವೀಕರಿಸುವಂತೆ ತಿಳಿಸಿದ್ದರು. ಅದರಂತೆ ಇಂದು ಠಾಣೆಗೆ ಬಂದ ಹಕೀಂರಿಗೆ ಠಾಣೆ ಎಸ್ಸೈ ರಕ್ಷಿತ್ ಉಪಸ್ಥಿತಿಯಲ್ಲಿ ತುಂಬೆ ಫಾದರ್ ಮುಲ್ಲರ್ ಸಿಬ್ಬಂದಿ ಜೈಸನ್ ನಗದನ್ನು ಹಸ್ತಾಂತರಿಸಿದರು. ಈ ವೇಳೆ ಹೆಡ್ ಕಾನ್ಸ್ಟೇಬಲ್ ಜನಾರ್ದನ, ಎಸ್ಸೈ ರಮೇಶ್ ಉಪಸ್ಥಿತರಿದ್ದರು. ಅನಾಮದೇಯ ನಗದನ್ನು ವಾರಿಸುವಾದರರಿಗೆ ತಳುಪುವಂತೆ ಮಾಡಿದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಸಿಬ್ಬಂದಿ ಜೆನಿಟ ಮೀನಾ ಡಿಕುನ್ನ ಅವರ ಕಾರ್ಯಕ್ಕೆ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಸೈ ಎ.ಕೆ.ರಕ್ಷಿತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.