ಮೂಡುಬಿದಿರೆ ಕ್ಷೇತ್ರ ದಿಂದ ಸ್ಪರ್ಧೆಗೆ ವಿಜಯ ಕುಮಾರ್ ಶೆಟ್ಟಿ ತಯಾರಿ ?
ಮಂಗಳೂರು,ನ.12:ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸದಿರಲು ತೀರ್ಮಾನಿಸಿದ ಬಳಿಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಬಗ್ಗೆ ತೀವ್ರ ಊಹಾಪೋಹ ನಡೆಯುತ್ತಿದೆ.
ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್ ರೈ ಈ ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ ಜನಸಂಪರ್ಕ ಪ್ರಾರಂಭಿಸಿದ್ದಾರೆ. ಆದರೆ ಈಗ ಇನ್ನೊಬ್ಬ ಹಿರಿಯ ನಾಯಕರ ಹೆಸರು ಕೇಳಿ ಬರುತ್ತಿದೆ. ಈ ಹಿಂದಿನ ಸುರತ್ಕಲ್ ಶಾಸಕ ವಿಜಯ ಕುಮಾರ್ ಶೆಟ್ಟಿ ಅವರು ಸ್ಪರ್ಧೆಗೆ ಉತ್ಸುಕರಾಗಿದ್ದಾರೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಹಿರಿಯ ನಾಯಕರ ಬೆಂಬಲ ಪಡೆಯಲು ಅವರ ಬೆಂಬಲಿಗರು ಈಗಾಗಲೇ ಕೆಲಸ ಪ್ರಾರಂಭಿಸಿದ್ದಾರೆ ಎಂದು ಸುದ್ದಿ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆದು ಕೊನೆಗೆ ಮೊಯ್ದಿನ್ ಬಾವ ಅವರು ಟಿಕೆಟ್ ಪಡೆದು ಗೆದ್ದು ಶಾಸಕರಾದರು.
ಆಗ ಶೆಟ್ಟರಿಗೆ ಪಕ್ಷ ನೀಡಿದ ಭರವಸೆ ಈಡೇರಿಸಿಲ್ಲ ಎಂಬ ಅಸಮಾಧಾನ ಅವರ ಬೆಂಬಲಿಗರಲ್ಲಿದೆ. ಈಗ ಶೆಟ್ಟರು ಮೂಡಬಿದರೆಯ ಮೇಲೆ ಕಣ್ಣಿಟ್ಟಿದ್ದಾರೆ.