×
Ad

ತನ್ವೀರ್ ಸೇಠ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಕೆ.ಎಸ್.ಈಶ್ವರಪ್ಪ

Update: 2016-11-12 16:46 IST

ಉಡುಪಿ,ನ.12 ರಾಜ್ಯದ ಶಿಕ್ಷಣ ಮಂತ್ರಿಯಾಗಿರುವ ತನ್ವೀರ್ ಸೇಠ್ ಅವರ ನಡವಳಿಕೆಯನ್ನು ರಾಜ್ಯದ ವಿದ್ಯಾರ್ಥಿಗಳು ಹಾಗೂ ಜನತೆ ಟಿವಿ ಮಾಧ್ಯಮದ ಮೂಲಕ ವೀಕ್ಷಿಸಿದ್ದಾರೆ. ಹಾಗಾಗಿ ತನ್ವೀರ್ ಸೇಠ್ ಮೊದಲು ರಾಜ್ಯದ ಜನತೆ ಮುಂದೆ ಕ್ಷಮೆ ಕೇಳಿ ನಂತರ ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಡದಿದ್ದರೆ ಮುಖ್ಯಮಂತ್ರಿಗಳು ತಕ್ಷಣ ಅವರನ್ನು ಮಂತ್ರಿ ಮಂಡಲದಿಂದ ಕೈಬಿಡಬೇಕು ಎಂದು ರಾಜ್ಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನ್ವೀರ್ ಸೇಠ್ ನಗ್ನ ಚಿತ್ರ ವೀಕ್ಷಣೆ ಮಾಡಿರುವುದು ಮಾಧ್ಯಮದವರ ಸೃಷ್ಠಿ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅಂದರೆ ಇದನ್ನು ಮಾಧ್ಯಮ ದವರೇ ನೋಡಿದ್ದಾರೆಂಬ ಭಾವನೆ ಬರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಬರದ ಸಮಯದಲ್ಲಿ ಜರ್ನಾದನ ರೆಡ್ಡಿ ತನ್ನ ಮಗಳ ಮದುವೆಯನ್ನು 500ಕೋಟಿ ರೂ. ವೆಚ್ಚದಲ್ಲಿ ಅದ್ದೂರಿಯಾಗಿ ಮಾಡುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಅವರ ಖಾಸಗಿ ವಿಚಾರ. ಅದಕ್ಕೆ ನಾನು ಪ್ರಕಿಕ್ರಿಯೆ ನೀಡಲ್ಲ. ಬಡವರಿಗೆ ಒಂದು ಲಕ್ಷವೇ ದೊಡ್ಡ ಮೊತ್ತವಾಗಿ ಕಾಣು ತ್ತದೆ. ಆದರೆ ಅವರಿಗೆ 500ಕೋಟಿ ರೂ. ಸಣ್ಣ ಮೊತ್ತ ಆಗಿರಬಹುದು. ವೈಯಕ್ತಿಕ ಹಾಗೂ ಅವರ ಮನೆಯ ವಿಚಾರ ಮಾತನಾಡಲು ನಾನು ಯಾರು ಅಲ್ಲ. ನನಗೆ ಯಾವುದೇ ಸಂಬಂಧ ಇಲ್ಲ ಎಂದರು.

 ವಿಚಾರವಾದಿಗಳು ಹಿಂದೂ ಸಂಸ್ಕೃತಿ, ಸಂತರು, ಮಠಾಧೀಶರನ್ನು ಟೀಕಿಸುವುದರಲ್ಲಿ ಆನಂದ ಪಡುವ ಅತೃಪ್ತ ಜೀವಿಗಳು. ಅವರಿಗೆ ಪ್ರಾಮುಖ್ಯತೆ ನೀಡುವ ಅಗತ್ಯ ಇಲ್ಲ. ಹಿಂದೂ ಧರ್ಮವನ್ನು ನಾಶ ಮಾಡಲು ರಾಕ್ಷಸರು, ದೇವರುಗಳಿಯೇ ಸಾಧ್ಯವಾಗದಿರುವಾಗ ಈ ವಿಚಾರ ವಾದಿಗಳಿಂದ ಆಗಲು ಸಾಧ್ಯವೇ. ಹಿಂದೂ ಧರ್ಮ ಪವಿತ್ರವಾದ ಧರ್ಮ. ಇಡೀ ಪ್ರಪ್ರಂಚಕ್ಕೆ ಮಾರ್ಗದರ್ಶನ ಮಾಡುವ ಧರ್ಮ. ಇದು ಖಂಡಿತ ಉಳಿಯುತ್ತದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಕ್ಕೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರ ತುರ್ತು ಆಗಿ ವಿಧಾನ ಸಭೆ, ವಿಧಾನ ಪರಿಷತ್ ಸೇರಿದಂತೆ ಸರ್ವ ಪಕ್ಷಗಳ ಸಭೆ ಕರೆಯಬೇಕು ಮತ್ತು ತಕ್ಷಣವೇ ಹಣ ಬಿಡುಗಡೆ ಮಾಡಿ ಎಲ್ಲ ಸಮಸ್ಯೆ ಬಗಹರಿಸಲು ಸಮಾರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.

ಕೇವಲ ಕೇಂದ್ರ ಸರಕಾರಕ್ಕೆ ಸಾವಿರಾರು ಕೋಟಿ ರೂ. ಪ್ರಸ್ತಾಪ ಸಲ್ಲಿಸಿದರೆ ಬರ ಪರಿಹಾರವಾಗುವುದಿಲ್ಲ. ರಾಜ್ಯದ ಕರ್ತವ್ಯ ಏನು ಅಂತ ತಿಳಿದು ಕೊಳ್ಳಬೇಕು. ಕಳೆದ ವರ್ಷ ಶೇ.68ರಷ್ಟು ಕೇಂದ್ರ ಸರಕಾರದಿಂದ ಬಂದ ಹಣ ಖರ್ಚು ಮಾಡಲಾಗಿತ್ತು. ಆದರೆ ರಾಜ್ಯ ಸರಕಾರ ಶೇ.32ರಷ್ಟು ಅನುದಾನ ದಲ್ಲಿ ಒಂದು ನಯಾ ಪೈಸೆ ವ್ಯಯ ಮಾಡಿಲ್ಲ ಎಂದು ಅವರು ಟೀಕಿಸಿದರು.

ಬಿಜೆಪಿ ಹಿಂದುಳಿದವರ್ಗ ಮೋರ್ಚಾದ ಸಭೆಯು ಆ.27ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಅದರಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗ ವಹಿಸಲಿದ್ದಾರೆ. ಪಕ್ಷಕ್ಕೆ ಸೇರಲು ಅನೇಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಈ ಬಗ್ಗೆ ಪಕ್ಷದ ಪ್ರಮುಖರು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅದರಂತೆ ಅವರನ್ನು ಆ ಸಭೆಯಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಇದು ಆಪರೇಷನ್ ಅಲ್ಲ. ಅವರಾಗಿಯೇ ಪಕ್ಷಕ್ಕೆ ಬರುವಾಗ ನಾವು ಬೇಡ ಅಂತಹ ಹೇಳುವುದಿಲ್ಲ. ನಾನು ಸೇರಿಸಿಕೊಳ್ಳದಿದ್ದರೆ ಬಿಜೆಪಿ ಪಕ್ಷ ಮಡಿ ಅಂತ ಹೇಳಬಹುದು. ನಮ್ಮಲ್ಲಿ ಯಾವುದೇ ಮಡಿ ಇಲ್ಲ. ಯಾರಿಗೆ ಸಮಾಜ ಸೇವೆ ಮಾಡಬೇಕು ಮತ್ತು ಪಕ್ಷದ ವಿಚಾರ ಸಿದ್ದಾಂತ ಯಾರು ಒಪ್ಪುತ್ತಾರೆಯೋ ಅವರನ್ನು ಸ್ಥಳೀಯ ನಾಯಕರ ಬಳಿ ಕೇಳಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಈಶ್ವರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News