×
Ad

500, 1000 ನೋಟುಗಳ ನಿಷೇಧ : ಉದ್ಯಮಿಗಳನ್ನು ಕಾಡುತ್ತಿರುವ ಕಮಿಷನ್ ಕಾಳ ದಂಧೆಕೋರರು!

Update: 2016-11-12 19:35 IST

ಮಂಗಳೂರು, ನ.12: ಕೇಂದ್ರ ಸರಕಾರ 500 ಮತ್ತು 1,000 ನೋಟುಗಳ ಚಲಾವಣೆಯನ್ನು ಸ್ಥಗಿತಗೊಳಿಸಿರುವುದರಿಂದ ಹೊಸ ನೋಟುಗಳ ಅಭಾವ ಸೃಷ್ಟಿಯಾದ ಬೆನ್ನಿಗೇ ಇದೀಗ ಕಾಳಸಂತೆಯಲ್ಲಿ ಕಮಿಷನ್ ದಂಧೆ ಪ್ರಾರಂಭವಾಗಿರುವ ಬಗ್ಗೆ ಕೇಳಿಬಂದಿದೆ.

ಸರಕಾರ ಹಠಾತಾಗಿ 500 ಮತ್ತು 1000 ಮಖ ಬೆಲೆಯ ನೋಟುಗಳನ್ನು ನಿಷೇಧಿಸುವುದರೊಂದಿಗೆ ಠೇವಣಿಯ ಮೇಲೂ ನಿರ್ಬಂಧ ಹೇರಿದೆ. ಮಾತ್ರವಲ್ಲದೆ, ಆದಾಯಕ್ಕೆ ಮೀರಿದ್ದರೆ ಠೇವಣಿ ಮಾಡಿದರೆ ಶೇ. 200ರಷ್ಟು ದಂಡ ವಿಧಿಸುವ ಬಗ್ಗೆಯೂ ಸರಕಾರ ಎಚ್ಚರಿಸಿದೆ. ಸರಕಾರದ ಈ ಕ್ರಮದಿಂದಾಗಿ ನಗದು ರೂಪದಲ್ಲಿ ಹಣವನ್ನು ಉಳಿಸಿಕೊಂಡಿರುವ ಉದ್ಯಮಿಗಳಿಗೆ ಸಂಕಷ್ಟ ತಂದೊಡ್ಡಿದೆ. ಇದರ ಪರೋಕ್ಷ ಲಾಭವನ್ನು ಪಡೆಯಲು ನಗರ ಹಾಗೂ ನಗರದ ಹೊರವಲಯದಲ್ಲಿ ಕಮಿಷನ್ ಕಾಳ ದಂಧೆಕೋರರು ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 ಹೊಸ ನೋಟುಗಳ ಹಾಗು ಹಳೆಯ 100 ರೂ ನೋಟುಗಳ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಈ ದಂಧೆಕೋರರು ಉದ್ಯಮಿಗಳನ್ನು ಗುಪ್ತವಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ಅವರ ಬಳಿ ಇರುವ 500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳನ್ನು ಪಡೆದು ಅದಕ್ಕೆ ಪ್ರತಿಯಾಗಿ 50, 100 ಮತ್ತು ಈಗ ಚಾಲ್ತಿಯಲ್ಲಿರುವ ಹೊಸ 2000 ರೂ. ಮುಖಬೆಲೆಯ ನೋಟುಗಳನ್ನು ನೀಡುತ್ತಿದ್ದಾರೆ. ಇದಕ್ಕಾಗಿ ಶೇ. 30ರಿಂದ ಶೇ. 50 ರಷ್ಟು ಕಮಿಷನ್ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿದೆ.

ಅಂದರೆ ಸಾವಿರ ರೂ.ಕೊಟ್ಟರೆ 100 ರೂ, 50 ರೂಗಳಲ್ಲಿ 500ರಿಂದ 700 ರೂ.ಮಾತ್ರ ಕೊಡುತ್ತಾರೆ.

ಇದೀಗ ದೊಡ್ಡ ದೊಡ್ಡ ಉದ್ಯಮಿಗಳ ಬೆನ್ನು ಬಿದ್ದಿರುವ ಈ ಕಮಿಷನ್ ದಂಧೆಕೋರರು ತಮ್ಮ ಬಳಿಯಲ್ಲಿ ಲಕ್ಷಾಂತರ ರೂ. ಅಥವಾ ಕೋಟ್ಯಂತರ ರೂ. ಮೊತ್ತದಲ್ಲಿ 100, 50ರ ಮುಖ ಬೆಲೆಯ ನೋಟುಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂದು ಹೇಳಲಾಗಿದೆ. ಹಳೆಯ ನೋಟುಗಳನ್ನು ಹೊಂದಿರುವ ಉದ್ಯಮಿಗಳ ಹುಟುಕಾಟದಲ್ಲಿದ್ದಾರೆ ಎನ್ನಲಾಗಿದೆ. ಉದ್ಯಮಿಗಳನ್ನು, ಕಪ್ಪು ಹಣ ಹೊಂದಿರುವವರನ್ನು ಸಂಪರ್ಕಿಸುತ್ತಿರುವ ಈ ದಂಧೆಕೋರರು ಅವರ ಮನೆಗೇ ತೆರಳಿ ಅವರ ಬಳಿ ಇರುವ ಹಳೆಯ ನೋಟುಗಳನ್ನು ಪಡೆದು 50 ಮತ್ತು 100 ಮುಖಬೆಲೆಯ ನೋಟುಗಳನ್ನು ಹಸ್ತಾಂತರಿಸುತ್ತಿದ್ದಾರೆ. 500, 1000 ಮುಖಬೆಲೆಯ ನೋಟುಗಳ ನಿಷೇಧ ಪ್ರಾರಂಭವಾದ ಮೊದಲ ದಿನದಿಂದಲೇ ಶೇ. 20ರ ಕಮಿಷನ್ ಮೇಲೆ ಹಣ ಪಾವತಿಸುತ್ತಿದ್ದ ಇವರು ಕಳೆದ ಎರಡು ದಿನಗಳಿಂದ ತಮ್ಮ ಕಮಿಷನ್ ಮೊತ್ತವನ್ನು ಶೇ. 35ಕ್ಕೇರಿಸಿದ್ದಾರೆನ್ನಲಾಗಿದೆ. ಅದರಲ್ಲೂ ತುರ್ತಾಗಿ ಹಣ ಬಯಸುವವರ ಪಾಲಿಗೆ ಲೂಟಿಕೋರರಾಗಿ ಪರಿಣಮಿಸಿರುವ ಇವರು ಶೇ. 50ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪಗಳೂ ಕೇಳಿಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News