ಪತ್ನಿಗೆ ಹಲ್ಲೆ ನಡೆಸಿ ಪತಿ ವಿಷ ಸೇವನೆ
ಕಾಸರಗೋಡು, ನ.12: ಪತ್ನಿಗೆ ಮಾರಕಾಯುಧದಿಂದ ಹಲ್ಲೆ ನಡೆಸಿ, ಪತಿ ವಿಷ ಸೇವಿಸಿದ ಘಟನೆ ಮುಳ್ಳೇರಿಯ ಸಮೀಪದ ಐತಡ್ಕದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಗಂಭೀರ ಸ್ಥಿತಿಯಲ್ಲಿದ್ದ ಸುಧಾಕರ(45) ಮತ್ತು ಅವರ ಪತ್ನಿ ಮಮತಾ(30) ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತಿ ಸುಧಾಕರ ಮಮತಾರಿಗೆ ಮಾರಕಾಯುಧದಿಂದ ಇರಿದಿದ್ದು, ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಸಂದರ್ಭ ಸುಧಾಕರ ಅಲ್ಲಿಂದ ಪರಾರಿಯಾಗಿದ್ದನು ಎನ್ನಲಾಗಿದೆ. ತಲೆ ಮತ್ತು ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯವಾಗಿದ್ದ ಮಮತಾರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.
ಸ್ಥಳೀಯರು ಸುಧಾಕರನನ್ನು ಹುಡುಕಾಡಿದಾಗ ಮನೆಗಿಂತ ಸ್ವಲ್ಪ ದೂರದಲ್ಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರು ಸಣ್ಣ ಮಕ್ಕಳ ಮುಂದೆಯೇ ಸುಧಾಕರ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಕೃತ್ಯಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.