×
Ad

ಮಂಗಳನಲ್ಲಿ ಅತ್ಯಂತ ಶುಷ್ಕ ವಾತಾವರಣ; ಜೀವ ಕಷ್ಟ: ಸಂಶೋಧನೆ

Update: 2016-11-13 00:16 IST

ಲಂಡನ್, ನ. 12: ಭೂಮಿಯ ಹೊರಗೆ ಇರಬಹುದಾದ ಜೀವರಾಶಿಯನ್ನು ಶೋಧಿಸಲು ಹೊರಡುವಾಗ, ಮೊದಲು ಕಣ್ಣು ಹಾಯುವುದೇ ಮಂಗಳ ಗ್ರಹದತ್ತ. ಅದೇ ವೇಳೆ, ಜೀವಿಯ ಅಸ್ತಿತ್ವಕ್ಕೆ ದ್ರವರೂಪದ ನೀರು ಅತ್ಯಂತ ಮಹತ್ವದ ಆವಶ್ಯಕತೆಯಾಗಿದೆ. ಆದರೆ, ಮಂಗಳ ಗ್ರಹವು ನಂಬಲು ಸಾಧ್ಯವಿಲ್ಲದಷ್ಟು ಶುಷ್ಕವಾಗಿದೆ ಹಾಗೂ ಲಕ್ಷಾಂತರ ವರ್ಷಗಳಿಂದಲೂ ಅದು ಇದೇ ರೀತಿಯಲ್ಲಿದೆ ಎಂಬುದಾಗಿ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಪತ್ತೆಹಚ್ಚಿದೆ.

 ‘‘300 ಕೋಟಿ ವರ್ಷಗಳಿಗಿಂತಲೂ ಹಿಂದೆ ಮಂಗಳ ಗ್ರಹ ತೇವಾಂಶ ಹೊಂದಿತ್ತು ಹಾಗೂ ವಾಸಯೋಗ್ಯವಾಗಿತ್ತು ಎಂಬುದನ್ನು ತೋರಿಸುವ ಪುರಾವೆಗಳಿವೆ. ಆದಾಗ್ಯೂ, ಈಗ ಅಲ್ಲಿನ ವಾತಾವರಣ ಎಷ್ಟು ಶುಷ್ಕವಾಗಿದೆ ಎನ್ನುವುದನ್ನು ಇತ್ತೀಚಿನ ಸಂಶೋಧನೆ ತೋರಿಸುತ್ತದೆ’’ ಎಂದು ಬ್ರಿಟನ್‌ನ ಸ್ಟರ್ಲಿಂಗ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಕ್ರಿಶ್ಚಿಯನ್ ಶ್ರಾಡರ್ ಹೇಳಿದರು.

‘‘ಮಂಗಳ ಗ್ರಹದ ಮೇಲ್ಮೈಯಲ್ಲಿ ಶುಷ್ಕ ವಾತಾವರಣವಿದೆ ಹಾಗೂ ಅಲ್ಲಿ ವಿಕಿರಣ ಹರಿದಾಡುತ್ತಿದೆ. ನಾವು ಶೋಧ ಮಾಡಿದ ಸ್ಥಳಗಳಲ್ಲಿ ಜೀವರಾಶಿ ಇರಬೇಕಾದರೆ, ಮೇಲ್ಮೈಯಿಂದ ತುಂಬಾ ಆಳದಲ್ಲಿ ಜೀವರಾಶಿಯನ್ನು ಪೋಷಿಸುವಂತಹ ಸ್ಥಳಗಳಿರಬೇಕು’’ ಎಂದು ಶ್ರಾಡರ್ ನುಡಿದರು.

ಸಂಶೋಧನೆಯು ‘ನೇಚರ್ ಕಮ್ಯುನಿಕೇಶನ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಈ ಲೇಖನವು ಮಂಗಳ ಗ್ರಹದ ಪ್ರಸಕ್ತ ವಾತಾವರಣದ ಬಗ್ಗೆ ಮಹತ್ವದ ಮಾಹಿತಿ ನೀಡುತ್ತದೆ ಹಾಗೂ ಇಂದು ಮಂಗಳ ಗ್ರಹದಲ್ಲಿ ಜೀವರಾಶಿ ಅಸ್ತಿತ್ವದಲ್ಲಿರುವುದು ಎಷ್ಟು ಕಷ್ಟ ಎಂಬುದನ್ನು ವಿವರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News