ಮುಲ್ಲರಪಟ್ಣ ಶರೀಫ್ ಸಾವು ಪ್ರಕರಣ: ತನಿಖೆ ಚುರುಕುಗೊಳಿಸುವಂತೆ ಆಗ್ರಹಿಸಿ ಎಸ್ಪಿಗೆ ಮನವಿ
ಬಂಟ್ವಾಳ, ನ. 13: ಮುಲ್ಲರಪಟ್ಣ ಫಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದ ಸಂದರ್ಭದಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಬೇಕೆಂದು ಆಗ್ರಹಿಸಿ ಮೃತ ಶರೀಫ್ ನ ಸಹೋದರ ಹಸೈನಾರ್ ರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆರವರಿಗೆ ಮನವಿ ಸಲ್ಲಿಸಿದರು.
ಶರೀಫ್ ಸಾವಿಗೆ ಪೊಲೀಸರ ಗೂಂಡಾ ವರ್ತನೆ ಹಾಗೂ ನಿರ್ಲಕ್ಷ್ಯವೇ ಕಾರಣ. ದಾಳಿ ಸಂದರ್ಭದಲ್ಲಿ ಪೊಲೀಸರು ನದಿ ಬದಿಯಲ್ಲಿದ್ದವರ ಅಮಾಯಕರ ಮೇಲೆ ಲಾಠಿ ಪ್ರಹಾರ ನಡೆಸಿದ್ದಲ್ಲದೆ ಕಲ್ಲು ತೂರಾಟ ನಡೆಸಿದ್ದಾರೆ. ಇದಿರಿಂದ ಗಲಿಬಿಲಿಗೊಂಡು ಓಡಿದ ಶರೀಫ್ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಶರೀಫ್ ನೀರಿನಲ್ಲಿ ಮುಳುಗಿ ಏಳುತ್ತಿದ್ದರೂ ಅವರ ರಕ್ಷಣೆಗೆ ಪೊಲೀಸರು ಧಾವಿಸದೆ ಕೆಟ್ಟ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಸಾಕ್ಷಿಯಾಗಿದ್ದಾರೆ. ಶರೀಫ್ ಸಾವಿಗೆ ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಪೊಲೀಸರ ನಿರ್ಲಕ್ಷ್ಯ ಹಾಗೂ ಗೂಂಡಾ ವರ್ತನೆಯಿಂದ ಶರೀಫ್ ಸಾವು ಸಂಭವಿಸಿದ್ದರೂ ಇದೊಂದು ಅಸಹಜ ಸಾವು ಪ್ರಕರಣ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಘಟನೆ ನಡೆದ ದಿನ ನಾನು ನೀಡಿದ ದೂರಿನ ಸತ್ಯಾಂಶವನ್ನು ಪೊಲೀಸರು ಪರಿಗಣಿಸದೆ ತಪ್ಪಿತಸ್ಥ ಪೊಲೀಸರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಪ್ರತ್ಯಕ್ಷಿದರ್ಶಿಗಳ ಹಾಗೂ ಘಟನೆಯಿಂದ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಝೈನುದ್ದೀನ್ ಎಂಬವರ ಹೇಳಿಕೆಯನ್ನೂ ಪಡೆದಿಲ್ಲ. ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿಯನ್ನು ಕೂಡಾ ಪೊಲೀಸರು ಇದುವರೆಗೆ ತರಿಸಿಕೊಂಡಿಲ್ಲ. ತಪ್ಪಿತಸ್ಥ ಪೊಲೀಸರನ್ನು ರಕ್ಷಿಸುವ ಉದ್ದೇಶದಿಂದ ಪ್ರಕರಣವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಹಸೈನಾರ್ ಮನವಿಯಲ್ಲಿ ದೂರಿದ್ದಾರೆ.
ಶರೀಫ್ ಸಾವು ಪ್ರಕರಣವನ್ನು ಗಂಭೀರ ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಬೇಕು. ಪ್ರತ್ಯಕ್ಷದರ್ಶಿಗಳ ಹಾಗೂ ಗಾಯಾಳು ಝೈನುದ್ದೀನ್ ಅವರ ಹೇಳಿಕೆಯನ್ನು ಪಡೆದು ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಮೃತ ಶರೀಫ್ ನ ತಾಯಿ, ಸಹೋದರ, ಕುಟುಂಬಸ್ಥರು ಉಪಸ್ಥಿತರಿದ್ದರು.