ಗೋದಾಮುಗಳಲ್ಲಿ ಆಹಾರ ಸಾಮಗ್ರಿ ದಾಸ್ತಾನಿಟ್ಟರೆ ಕ್ರಮ: ಸಚಿವ ಖಾದರ್
ಮಂಗಳೂರು, ನ.13: ರಾಜ್ಯದ ಯಾವುದೇ ಗೋದಾಮುಗಳಲ್ಲಿ ಯಾವುದೇ ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನಿಟ್ಟರೆ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರಾದ್ಯಂತ 500 ಮತ್ತು 1,000 ರೂ. ನೋಟು ಅಮಾನ್ಯಗೊಂಡ ಬಳಿಕ ಉದ್ಭವಿಸಿದ ‘ಚಿಲ್ಲರೆ’ ಸಮಸ್ಯೆಯ ನಡುವೆ ಆಹಾರಗಳನ್ನು ದಾಸ್ತಾನುಗೈದು ಗೊಂದಲ ಸೃಷ್ಟಿಸುವ ಪ್ರಕ್ರಿಯೆ ರಾಜ್ಯದೆಲ್ಲೆಡೆ ನಡೆಯುತ್ತಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ರವಿವಾರ ನಗರದಲ್ಲಿ ಮಾಧ್ಯಮ ವರದಿಗಾರರ ಜೊತೆ ಅವರು ಮಾತನಾಡಿದರು.
ರಖಂ ಮಳಿಗೆಗಳಲ್ಲಿ 1 ಸಾವಿರ ಟನ್‌ಗಿಂತ ಮತ್ತು ಚಿಲ್ಲರೆ ಅಂಗಡಿಗಳಲ್ಲಿ 100 ಟನ್‌ಗಿಂತ ಅಧಿಕ ಆಹಾರ ಸಾಮಗ್ರಿ ದಾಸ್ತಾನು ಇಡುವಂತಿಲ್ಲ. ಈ ಬಗ್ಗೆ ಈಗಾಗಲೆ ಸೂಚನೆ ನೀಡಲಾಗಿದೆ. ಅದನ್ನು ಮೀರಿ ಅಕ್ರಮವಾಗಿ ದಾಸ್ತಾನಿಟ್ಟು ಕೃತಕವಾಗಿ ಆಹಾರ ಅಭಾವ ಸೃಷ್ಟಿಸಿದರೆ ದಾಳಿ ನಡೆಸಲು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಇಂತಹ ದಾಸ್ತಾನುಗಳು ಕಂಡುಬಂದರೆ ಕಠಿಣ ಕ್ರಮ ಜರಗಿಸಲಾಗುವುದು ಎಂದು ಖಾದರ್ ಎಚ್ಚರಿಸಿದರು.
ಜನಸಾಮಾನ್ಯರಿಗೆ ಚಿಲ್ಲರೆ ಸಮಸ್ಯೆಯಾಗಿದ್ದರೂ ಕೂಡ ರಾಜ್ಯದ ಎಲ್ಲೂ ಕೂಡಾ ಆಹಾರದ ಕೊರತೆ ಆಗಿಲ್ಲ. ಎಣ್ಣೆ, ಉಪ್ಪು ಧಾರಾಳವಾಗಿ ಲಭ್ಯವಿದೆ. ಆಹಾರ ಕೊರತೆಯಾಗಲಿದೆ ಎಂಬುದು ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವಾಗಿದೆ ಎಂದು ಸಚಿವ ಖಾದರ್ ತಿಳಿಸಿದರು.