×
Ad

ಪ್ರತಿಪಕ್ಷಗಳ ಟೀಕೆಗೆ ಅಂಜಿ ಮೋದಿಯಿಂದ ನೋಟು ಅಮಾನ್ಯ: ರಿಝ್ವನ್ ಹರ್ಷದ್

Update: 2016-11-13 18:39 IST

ಮಂಗಳೂರು, ನ.13: ಚುನಾವಣೆಯ ವೇಳೆ ವಿದೇಶದಲ್ಲಿರುವ ಕಪ್ಪುಹಣ ಭಾರತಕ್ಕೆ ತರುತ್ತೇನೆ ಎಂದು ಹೇಳಿದ್ದ ಪ್ರಧಾನಿ ಮೋದಿ, ಆ ಬಗ್ಗೆ ಯಾವುದೇ ಕೆಲಸ ಮಾಡದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಟೀಕೆಯನ್ನು ಎದುರಿಸಲಾಗದೆ ನೋಟುಗಳ ಅಮಾನ್ಯ ಪ್ರಕ್ರಿಯೆಗೆ ಕೈ ಹಾಕಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ರಿಝ್ವೆನ್ ಹರ್ಷದ್ ಆರೋಪಿಸಿದರು.

ರವಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೋಟುಗಳ ಬದಲಾವಣೆ ಬಗ್ಗೆ ಪ್ರಧಾನಿ ರಾಷ್ಟ್ರಕ್ಕೆ ತಿಳಿಸುವ ಮುನ್ನವೇ, ಬಿಜೆಪಿ ನಾಯಕರ ಅಕೌಂಟ್‌ಗಳಿಗೆ ಕೋಟಿ ಕೋಟಿ ಹಣವನ್ನು ಹಾಕಲಾಗಿದೆ. ಸಾರ್ವಜನಿಕರು ಯಾವ ರೀತಿ ಬವಣೆ ಪಡುತ್ತಾರೆ ಎಂಬುದನ್ನು ತಿಳಿಯುವ ಬದಲು ಮರುದಿನವೇ ಮೋದಿ ಜಪಾನ್ ಪ್ರವಾಸ ಕೈಗೊಂಡಿದ್ದರು. ಇದೀಗ ನೋಟುಗಳ ಬದಲಾವಣೆ ಬಿಸ್‌ನೆಸ್ ಆಗಿ ಮಾರ್ಪಾಟಾಗಿದ್ದು, ಹಲವರು ಕಮಿಷನ್ ಪಡೆದು ನೋಟು ಬದಲಾವಣೆ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಈಗಾಗಲೇ ಗುರುತಿಸುವ ಕಾರ್ಯ ಆರಂಭವಾಗಿದೆ. ಈ ಬಾರಿಯ ರಾಜ್ಯ ಮಂತ್ರಿಮಂಡಲದಲ್ಲಿ ಏಳೆಂಟು ಮಂದಿ ಯುವ ಸಚಿವರಿದ್ದಾರೆ. ನಾನು ಕೂಡ ಯುವ ಕಾಂಗ್ರೆಸ್‌ನಿಂದ ಪರಿಷತ್ತಿಗೆ ಆಯ್ಕೆಯಾಗಿದ್ದೇನೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇರುವುದರಿಂದ ಗೆಲ್ಲುವ ಯುವ ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಒಂದು ವರ್ಷದಲ್ಲಿ ಅಂತಹ ಅಭ್ಯರ್ಥಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು ಎಂದರು.

ಈ ಬಾರಿ 10 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿತ್ತು. ಈಗಾಗಲೇ ಆರೂವರೆ ಲಕ್ಷ ಮಂದಿ ಸದಸ್ಯರಾಗಿದ್ದಾರೆ. ನ.25ರೊಳಗೆ ಪೂರ್ಣಗೊಳ್ಳಬೇಕಾಗಿದ್ದ ಸದಸ್ಯತ್ವ ಅಭಿಯಾನವನ್ನು ಮತ್ತೆ ಒಂದು ವಾರ ವಿಸ್ತರಿಸುವಂತೆ ಕೋರಲಾಗುವುದು. ಈ ಬಾರಿ 15 ಲಕ್ಷವರೆಗೆ ಸದಸ್ಯತ್ವ ನೋಂದಣಿಯಾಗುವ ಸಾಧ್ಯತೆ ಇದೆ. ನಂತರ ಯುವ ಕಾಂಗ್ರೆಸ್‌ನ ಆಂತರಿಕ ಚುನಾವಣೆ ನಡೆಯಲಿದೆ ಎಂದರು.

ಹೆಲ್ಪ್ ಡೆಸ್ಕ್

ಹಳೆ ನೋಟು ಬದಲಾವಣೆಗೆ ಸಂಬಂಧಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಯುವ ಕಾಂಗ್ರೆಸ್ ವತಿಯಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳ ಎದುರು ನ.14ರಿಂದ ಹೆಲ್ಫ್‌ಡೆಸ್ಕ್ ತೆರೆಯಲಾಗುವುದು. ದ.ಕ.ಜಿಲ್ಲೆಯ 5 ತಾಲೂಕು ಕೇಂದ್ರಗಳಲ್ಲಿ ಯುವ ಕಾಂಗ್ರೆಸ್ ಹೆಲ್ಫ್‌ಡೆಸ್ಕ್ ತೆರೆಯಲಿದೆ ಎಂದು ರಿಝ್ವನ್ ಅಹ್ಮದ್ ಹೇಳಿದರು.

ಹಳೆ ನೋಟು ಬದಲಾವಣೆಗೆ ಆಗಮಿಸುವವರಿಗೆ ಅರ್ಜಿ ಫಾರಂ ತುಂಬಿಸಿಕೊಡುವುದು, ಕುಡಿಯಲು ನೀರು, ಆಹಾರವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಪೂರೈಸಲಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ನಝೀರ್ ಬಜಾಲ್, ಅಝೀಝ್ ಹೆಜಮಾಡಿ, ಪ್ರವೀಣ್ ಆಳ್ವ, ಲುಕ್ಮಾನ್, ಮೇರಿಲ್ ರೇಗೋ, ಸುಹೈಲ್ ಕಂದಕ್, ಪ್ರಸಾದ್ ಮಲ್ಲಿ, ಶುಹೈಬ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News