ನೃತ್ಯಕಲೆ ಮತ್ತು ಆಧ್ಯಾತ್ಮ ಪ್ರೇರಣೆ ಭರತಮುನಿ ಕೊಡುಗೆ: ಪೇಜಾವರ ಶ್ರೀ
ಉಡುಪಿ, ನ.13: ನೃತ್ಯಕಲೆ ಹಾಗೂ ಆಧ್ಯಾತ್ಮ ಪ್ರೇರಣೆ ಭರತಮುನಿಯು ದೇಶಕ್ಕೆ ನೀಡಿದ ಅಮೂಲ್ಯವಾದ ಕೊಡುಗೆಯಾಗಿದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನದ ವತಿಯಿಂದ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಭರತಮುನಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಎಲ್ಲವನ್ನು ತ್ಯಾಗ ಮಾಡಿ ಕಾಡಿಗೆ ಹೋಗಿ ದೊಡ್ಡ ತಪಸ್ವಿಯಾದ ಭರತಮುನಿ ಆಧ್ಯಾತ್ಮ ಉನ್ನತಿಗೆ ಮೆಟ್ಟಿಲನ್ನು ತೋರಿದವರು. ಭಾರತ ಎಂದಾಕ್ಷಣ ನಮಗೆ ನಾಲ್ವರು ಭರತರು ನೆನಪಿಗೆ ಬರುತ್ತಾರೆ. ವೃಷಭರ ಮಗ ಭರತ, ರಾಮನ ತಮ್ಮ ಭರತ, ದುಷ್ಯಂತನ ಮಗ ಭರತ ಮತ್ತು ಭರತಮುನಿ ಈ ನಾಲ್ವರಾಗಿದ್ದಾರೆ ಎಂದರು.
ಸಂಗೀತ ಮತ್ತು ನೃತ್ಯ ಭಗವಂತನ ಸೇವೆಯಲ್ಲಿ ಅತಿಮುಖ್ಯವಾದುದು. ಅವಿಲ್ಲದೇ ಯಾವುದೇ ಪೂಜೆ ಅಪೂರ್ಣ. ನೃತ್ಯವನ್ನು ಕಣ್ಣಿಂದ ಕಾಣುವ ಯಜ್ಞ ಎಂದು ಕಾಳಿದಾಸ ಬಣ್ಣಿಸಿದ್ದಾನೆ ಎಂದು ಪೇಜಾವರಶ್ರೀ ಹೇಳಿದರು.
ಇದೇ ಸಂದರ್ಭದಲ್ಲಿ ಸ್ವಾಮೀಜಿ ಅವರು ಬೆಂಗಳೂರಿನ ಕೇಶವ ನೃತ್ಯ ಶಾಲಾದ ಗುರು ವಿದ್ವಾನ್ ಬಿ.ಕೆ. ಶ್ಯಾಮಪ್ರಕಾಶ್, ಬೆಂಗಳೂರಿನ ವಿಶ್ರುತ ಪ್ರದರ್ಶನ ಕಲಾ ಶಾಲೆಯ ಗುರು ವಿದುಷಿ ವಸಂತಲಕ್ಷ್ಮೀ, ಉಡುಪಿಯ ಗಾನಶ್ರೀ ಸಂಗೀತ ಶಾಲೆಯ ಗುರು ವಿದುಷಿ ಲತಾ ತಂತ್ರಿ ಹಾಗೂ ಉಡುಪಿ ಅಕಾಡೆಮಿ ಸ್ಕೂಲ್ ಆಫ್ ಮ್ಯೂಸಿಕ್ ಎಂಡ್ ಫೈನ್ ಆರ್ಟ್ಸ್‌ನ ಪ್ರಾದ್ಯಾಪಕರಾದ ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ‘ಭರತ ಪ್ರಶಸ್ತಿ’ ನೀಡಿ ಗೌರವಿಸಿ ದರು. ಉಡುಪಿಯ ಬಾಷಾ ಆರ್ಟ್ಸ್‌ನ ಸುಹೀಲ್ ಅವರಿಗೆ ‘ಕಲಾರ್ಪಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಂಜಿಎಂ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಡಾ.ವೀಣಾ ಬಿ.ಕೆ., ಸಂಗೀತ ಗುರು ಪ್ರೇಮಾ ಆರ್.ತಂತ್ರಿ, ರಾಧಾಕೃಷ್ಣ ನೃತ್ಯ ನಿಕೇತನದ ನೃತ್ಯಗುರು ವೀಣಾ ಎಂ.ಸಾಮಗ, ಸಂಚಾಲಕ ಬಿ.ಮುರಳೀಧರ ಸಾಮಗ ಉಪಸ್ಥಿತರಿದ್ದರು.