ಪ್ರೊ.ಡಾ.ಎಂ.ಅಬ್ದುಲ್ ರಹಿಮಾನ್‌ರಿಗೆ ‘ಭಾರತ ಗೌರವ ಪ್ರಶಸ್ತಿ’
ಮಂಗಳೂರು, ನ.13: ನಗರದ ಖ್ಯಾತ ಶಿಕ್ಷಣ ಸಲಹಾ ತಜ್ಞ ಪ್ರೊ.ಡಾ.ಎಂ.ಅಬ್ದುಲ್ ರಹಿಮಾನ್‌ರಿಗೆ ಇಂಡಿಯಾ ಇಂಟರ್‌ನ್ಯಾಷನಲ್ ಫ್ರೆಂಡ್‌ಶಿಪ್ ಸೊಸೈಟಿಯ ಪ್ರತಿಷ್ಠಿತ ಭಾರತ ಗೌರವ ಪ್ರಶಸ್ತಿ ಸಂದಿದೆ.
ವಿಜ್ಞಾನ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿ, ಹಲವು ಮಂದಿಗೆ ಸ್ಫೂರ್ತಿದಾಯಕ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆ ಪ್ರಕಟಿಸಿದೆ. ಈ ಪ್ರಶಸ್ತಿ ಪ್ರದಾನ ಸಮಾರಂ ಡಿಸೆಂಬರ್ 21ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ.
ಡಾ.ಅಬ್ದುಲ್ ರಹಿಮಾನ್‌ರವರು ಕಲ್ಲಿಕೋಟೆ ವಿಶ್ವವಿದ್ಯಾನಿಲಯ ಆಯೋಗದ ಅಧ್ಯಕ್ಷರಾಗಿ, ಕಣ್ಣೂರು ಹಾಗೂ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಮಂಗಳೂರಿನಲ್ಲಿ ಜನಿಸಿದ ರಹಿಮಾನ್, 1969ರಲ್ಲಿ ಮೈಸೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದು ಬಳಿಕ 2000 ವರೆಗೂ ಮಂಗಳೂರು ವಿವಿಯಲ್ಲಿ ಅಧ್ಯಾಪನ ವೃತ್ತಿ ಕೈಗೊಂಡರು.
ಪರಿಸರ ತಳಿವಿಜ್ಞಾನದಲ್ಲಿ ವಿಶೇಷ ಪ್ರಾವಿಣ್ಯತೆ ಗಳಿಸಿದ ರಹಿಮಾನ್ 75ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ. 12 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮಾರ್ಗದರ್ಶನ ನೀಡಿದ್ದಾರೆ. ಜಪಾನ್, ಸಿಂಗಾಪುರ, ಜರ್ಮನಿ, ಗ್ರೀಸ್ ಸೇರಿದಂತೆ ಹಲವು ವಿವಿಗಳಲ್ಲಿ, ಮಧ್ಯಪ್ರಾಚ್ಯ ಪ್ರದೇಶದ ಯುಎಇ, ಕುವೈತ್, ಬಹರೈನ್ ಹಾಗೂ ಸೌದಿ ಅರೇಬಿಯಾದ ಹಲವು ವಿಶ್ವವಿದ್ಯಾನಿಲಯಗಳಿಗೂ ಭೇಟಿ ನೀಡಿದ್ದಾರೆ.
1997ರಲ್ಲಿ ಉತ್ತಮ ವಿಜ್ಞಾನಿ ಪ್ರಶಸ್ತಿ, ಡಾ.ಶಿವರಾಮ ಕಾರಂತ ಅಂತಾರಾಷ್ಟ್ರೀಯ ಸುವರ್ಣ ಪರಿಸರ ರತ್ನ ಪ್ರಶಸ್ತಿ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಪರಿಸರ ರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರ ಸಾಧನೆಯನ್ನು ಅರಸಿಕೊಂಡು ಬಂದಿವೆ.