ಪ್ರಾಚೀನ ಕ್ಷೇತ್ರ, ಸ್ಮಾರಕಗಳ ರಕ್ಷಣೆಗೆ ಗಮನಹರಿಸಬೇಕು: ಡಾ.ಡಿ.ವೀರೇಂದ್ರ ಹೆಗ್ಗಡೆ
ಬೆಳ್ತಂಗಡಿ, ನ.13: ಪ್ರಾಚೀನ ಕ್ಷೇತ್ರಗಳ, ಸ್ಮಾರಕಗಳ ರಕ್ಷಣೆಗೆ ಸರಕಾರ ಕೈಗೊಂಡ ಕ್ರಮಗಳು ಏನೇನೂ ಸಾಲದು. ಹೀಗಾಗಿ ಸಂಬಂಧ ಪಟ್ಟ ಇಲಾಖೆಯವರು ಈ ಬಗ್ಗೆ ಗಮನಹರಿಸಬೇಕು ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ರವಿವಾರ ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗದ ಸಹಯೋಗದೊಂದಿಗೆ ಮೈಸೂರಿನ ಭಾರತೀ ಪ್ರಕಾಶನ ಹೊರತಂದ ‘ದೇಗುಲಗಳ ದಾರಿ’ ಹಾಗೂ ‘ಗುಡಿಗೋಪುರಗಳ ಸುತ್ತಮುತ್ತ’ ಎಂಬೆರೆಡು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ದೇಗುಲಗಳು ಹಾಗೂ ಸ್ಮಾರಕಗಳು ಮಾಹಿತಿಯ ಆಗರವಾಗಿದ್ದು ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ರಾಜ್ಯದ ಕೆಲ ಪ್ರಾಚೀನ ಸ್ಮಾರಕ, ಮಂದಿರಗಳನ್ನು ಗಮನಿಸಿದರೆ ಅತ್ಯಂತ ದುರವಸ್ಥೆಯಿಂದ ಕೂಡಿವೆ. ಇದನ್ನು ಗಮನಿಸಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ನ್ನು ಸ್ಥಾಪಿಸಲಾಗಿದ್ದು ರಾಜ್ಯ ಸರಕಾರ ಹಾಗೂ ಜನರ ಸಹಯೋಗದೊಂದಿಗೆ 200 ಕ್ಕೂ ಮಿಕ್ಕಿ ರಾಜ್ಯದ ಪರಂಪರೆಯನ್ನು ಸಾರುವ ವೈಶಿಷ್ಟ್ಯಪೂರ್ಣ ಸ್ಮಾರಕಗಳನ್ನು ನವೀಕರಿಸಲಾಗಿದೆ. ನವೀಕರಣ ಮಾಡುವ ಸಂದರ್ಭದಲ್ಲಿ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ, ಪ್ರಾಚೀನ ಶಿಲ್ಪ ಶೈಲಿಯಲ್ಲಿ ಬದಲಾವಣೆಯಾಗದ ರೀತಿಯಲ್ಲಿ ಗಮನಹರಿಸಲಾಗಿದೆ. ಇತ್ತೀಚೆಗಷ್ಟೇ ಕಾಗಿನೆಲೆಯಲ್ಲಿ ಎರಡು ದೇವಾಲಯಗಳನ್ನು ನವೀಕರಿಸಲಾಗಿದೆ. ಹವ್ಯಾಸಿ ವೀಕ್ಷಣಾ ಬಳಗದವರ ಗಮನಕ್ಕೆ ದುಃಸ್ಥಿತಿಯಲ್ಲಿರುವ ಇಂತಹ ಪ್ರಾಚೀನ ದೇವಾಲಯಗಳು ಕಂಡು ಬಂದಲ್ಲಿ ನಮಗೆ ಮಾಹಿತಿ, ಸಲಹೆ ನೀಡಿದರೆ ಅದರ ಬಗ್ಗೆ ಗಮನಹರಿಸಲಾಗುವುದು ಎಂದರು.
ಬಳಗದವರು ಕ್ಷೇತ್ರದಲ್ಲಿ ಪ್ರದರ್ಶಿಸಿರುವ ಗುಡಿಗೋಪುರಗಳ ಛಾಯಾಚಿತ್ರ ಪ್ರದರ್ಶನದ ಮೂಲಕ ರಾಜ್ಯದ ಎಲ್ಲಾ ದೇವಾಲಯಗಳನ್ನು ಧರ್ಮಸ್ಥಳಕ್ಕೆ ತಂದಿದ್ದಾರೆ. ಸಾಮಾನ್ಯ ಪ್ರಜೆಗಳಿಗೆ ಧರ್ಮ, ಸಂಸ್ಕೃತಿ, ವೇದ, ಪುರಾಣಗಳ ಬಗ್ಗೆ ಮಾಹಿತಿ ನೀಡುವುದು, ಬದುಕಿನ ಆಚಾರ ವಿಚಾರಗಳ ಬಗ್ಗೆ, ಚತುರ್ವಿಧ ಪುರುಷಾರ್ಥಗಳ ಬಗ್ಗೆ ಮಾರ್ಗದರ್ಶನ ನೀಡುವುದೇ ದೇವಸ್ಥಾನಗಳು. ದೇವಾಲಯಗಳ ಶಕ್ತಿ, ಚೈತನ್ಯ, ಸಾನಿಧ್ಯ ಇನ್ನೂ ಉಳಿದುಕೊಂಡಿದೆ ಎಂಬುದಕ್ಕೆ ಈಚೆಗೆ ಧರ್ಮಸ್ಥಳದ ಸುತ್ತ ಮುತ್ತ ಜಿಲ್ಲೆಯಾದ್ಯಂತ 300 ವರ್ಷಗಳಷ್ಟು ಹಳೆಯದಾದ ದೇವಸ್ಥಾನಗಳು ನವೀಕರಣಗೊಂಡಿರುವುದಕ್ಕೆ ಸಾಕ್ಷಿ ಎಂದರು.
ಬೆಂಗಳೂರು ಬಿಎಸ್ಸೆನ್ನೆಲ್ ಉಪ ಮಹಾಪ್ರಬಂಧಕ, ವೀಕ್ಷಣಾ ಬಳಗದ ಅಧ್ಯಕ್ಷ ಗಣಪತಿ ಮ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಗೌರಿಪುರ ಚಂದ್ರು ಅತಿಥಿಗಳಾಗಿದ್ದರು. ಪುಸ್ತಕಗಳ ಸಂಪಾದಕರಾದ ಟಿ.ಎಸ್. ಗೋಪಾಲ್, ಡಾ.ಚಿಂತಾಮಣಿ ಕೊಡ್ಲೆಕೆರೆ ವೇದಿಕೆಯಲ್ಲಿದ್ದರು. ವೀಕ್ಷಣಾ ಬಳಗದ ಕಾರ್ಯದರ್ಶಿ ಕೆಂಗೇರಿ ಚಕ್ರಪಾಣಿ ಸ್ವಾಗತಿಸಿದರು. ಖಜಾಂಚಿ ಚಂದ್ರಪ್ಪವಂದಿಸಿದರು.
ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗ 2009ರಲ್ಲಿ ಸ್ಥಾಪನೆಗೊಂಡು ಈವರೆಗೂ ನಾಡಿನ 190ಕ್ಕೂ ಹೆಚ್ಚು ಸ್ಥಳಗಳ ನೂರಾರು ಪುರಾತನ ದೇಗುಲಗಳನ್ನು ಪ್ರವಾಸಿ ಮಿತ್ರರಿಗೆ ಪರಿಚಯಿಸಿದೆ. ಈ ದೇಗುಲಗಳ ಮಾಹಿತಿಗಳನ್ನು ಒಳಗೊಂಡ ಪುಸ್ತಕಗಳ ಪ್ರಕಟಣೆಯನ್ನೂ ಹಮ್ಮಿಕೊಂಡಿದೆ.