‘ಮಕ್ಕಳತ್ರ ಮಾತಾಡಿ ಪ್ಲೀಸ್’ ಪುಸ್ತಕ ಅನಾವರಣ

Update: 2016-11-13 14:32 GMT

ಉಡುಪಿ, ನ.13: ಉಡುಪಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋರೋಗ ತಜ್ಞ ಡಾ.ವಿರೂಪಾಕ್ಷ ದೇವರಮನೆ ಅವರ ‘ಮಕ್ಕಳತ್ರ ಮಾತಾಡಿ ಪ್ಲೀಸ್’ ಕೃತಿಯನ್ನು ಹಿರಿಯ ಪತ್ರಕರ್ತೆ ಸಂಧ್ಯಾ ಎಸ್.ಪೈ ಇಂದು ಸಂಜೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಿಡುಗಡೆಗೊಳಿಸಿದರು.

ಸಾವಣ್ಣ ಪ್ರಕಾಶನದ 50ನೆ ಪುಸ್ತಕವಾಗಿ ಬಿಡುಗಡೆಗೊಂಡ ಈ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದ ಸಂಧ್ಯಾ ಪೈ, ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡುವುದರಿಂದ ಇಡೀ ಕುಟುಂಬ ಒಂದಾಗಲು ಸಾಧ್ಯವಿದೆ. ಕುಟುಂಬವನ್ನು ಬೆಸೆಯುವ ತಂತುವಾಗಿ ಈ ಮಾತು ಕಾರ್ಯನಿರ್ವಹಿಸುತ್ತದೆ ಎಂದರು.

ಇಂದು ಸಮಾಜದಲ್ಲಿ ಕೊರತೆಯಿರುವುದು ಒಳ್ಳೆಯ ಸಂವಹನಕ್ಕೆ. ಇದರಿಂದ ಮನಸ್ಸು-ಮನಸ್ಸುಗಳ ನಡುವೆ, ಮನೆಯೊಳಗಿನ ಸದಸ್ಯರ ನಡುವೆ ಒಳ್ಳೆಯ ಬಾಂಧ್ಯವ ಸಾಧ್ಯವಾಗುತ್ತಿಲ್ಲ. ಇಂದು ಮಕ್ಕಳೊಂದಿಗೆ ಮಾತ್ರವಲ್ಲ ಎಲ್ಲರೊಂದಿಗೂ ಉತ್ತಮ ಸಂವಹನ ಸಾದ್ಯವಾಗಬೇಕು ಎಂದು ಸಂಧ್ಯಾ ಪೈ ಹೇಳಿದರು.

ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ಮುಂಬಯಿ ಅಣುಶಕ್ತಿ ನಗರದ ಅಟಾಮಿಕ್ ಎನರ್ಜಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ರಾಮಚಂದರ್ ಗೌಡ ಹಾಗೂ ಸಾವಣ್ಣ ಪ್ರಕಾಶನದ ಜಮೀಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಲೇಖಕ ಡಾ.ವಿರೂಪಾಕ್ಷ ದೇವರಮನೆ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಹೊಸಪೇಟೆಯ ಸಖಿ ಸಂಘಟನೆಯ ಡಾ.ಭಾಗ್ಯಲಕ್ಷ್ಮೀ ಅವರು ಕೃತಿಯನ್ನು ಪರಿಚಯಿಸಿದರು. ಅವಿನಾಶ್ ಕಾಮತ್ ಹಾಗೂ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News