ಎನ್‌ಪಿಎಸ್ ರದ್ದುಗೊಳಿಸುವಂತೆ ಶಾಸಕರಿಗೆ ನೌಕರರ ಮನವಿ

Update: 2016-11-13 14:47 GMT

ಪುತ್ತೂರು, ನ.13: 2006ರ ನಂತರ ಸರಕಾರಿ ನೌಕರಿಗೆ ಸೇರಿದ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಕಡ್ಡಾಯಗೊಳಿಸಿದ್ದು, ಈ ಪದ್ಧತಿಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಪುತ್ತೂರಿನ ಶಾಸಕಿ ಹಾಗೂ ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ.ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

2006ರ ನಂತರ ಸರಕಾರಿ ನೌಕರಿಗೆ ಸೇರಿದ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಕಡ್ಡಾಯಗೊಳಿಸಿದ್ದು, ಇದರಿಂದ ನೌಕರರ ನಿವೃತ್ತಿಯ ನಂತರದ ಜೀವನ ಅತಂತ್ರವಾಗಲಿದೆ. ನಿವೃತ್ತಿಯ ನಂತರ ನಿಶ್ಚಿತ ಪಿಂಚಣಿ ಗಗನ ಕುಸುಮವಾಗಲಿದ್ದು, ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿಯೆತ್ತಬೇಕೆಂದು ಮನವಿಯ ಮೂಲಕ ಆಗ್ರಹಿಸಲಾಯಿತು.

ಹೊಸ ಪಿಂಚಣಿ ಯೋಜನೆ ಯೋಜನೆ ನೌಕರರ ಮುಂದಿನ ಭವಿಷ್ಯವನ್ನು ಕರಾಳವಾಗಿಸಿದೆ. ನೌಕರರು ಮರಣ ಹೊಂದಿದರೆ ಅವಲಂಬಿತರಿಗೆ ಯಾವುದೇ ನೆರವು ಇಲ್ಲ. ನಿವೃತ್ತಿಯ ನಂತರ ಯಾವುದೇ ಭದ್ರತೆಯಿಲ್ಲದ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಬೇಕು ಎಂದು ಈ ಸಂದರ್ಭದಲ್ಲಿ ಶಾಸಕಿ ಅವರನ್ನು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಶಾಸಕರಿಗೆ ಮನವಿ ನೀಡಿದ ಎನ್‌ಪಿಎಸ್ ನೌಕರರ ಸಂಘದ ನಿಯೋಗದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹೀಂ, ಸಂಚಾಲಕ ಕ್ಯಾತಲಿಂಗ, ತಾಲೂಕು ಘಟಕದ ಅಧ್ಯಕ್ಷರಾದ ದಿನೇಶ್ ಮಾಚಾರ್, ಕಾರ್ಯದರ್ಶಿ ವಿಮಲ್ ಕುಮಾರ್ ನೆಲ್ಯಾಡಿ, ಸಂಘಟನಾ ಕಾರ್ಯದರ್ಶಿ ಮುಹ್ಮಮದ್ ಅಶ್ರಫ್, ಸದಸ್ಯರಾದ ಮುಹಮ್ಮದ್ ಶರೀಫ್ ಕೆ.ಪಿ., ವೆಂಕಟೇಶ್ ಅನಂತಾಡಿ, ಪ್ರಶಾಂತ್ ಅನಂತಾಡಿ, ಸುನಿಲ್ ಕುಮಾರ್ ಎ.ಎಂ., ಶಿವಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News