ಬಸ್‌ಗಾಗಿ ಕಾಯುತ್ತಿದ್ದ ತಾಯಿ-ಮಗುವನ್ನು ಬಲಿಪಡೆದ ಕಾರು
ಉಡುಪಿ, ನ.13: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಾಂಗಾಳ ಬಸ್ ನಿಲ್ದಾಣದಲ್ಲಿ ಉಡುಪಿಗೆ ತೆರಳುವ ಬಸ್ಸಿಗಾಗಿ ಕಾಯುತ್ತಿದ್ದ ತಾಯಿ-ಮಗುವಿನ ಮೇಲೆ ವೇಗವಾಗಿ ಧಾವಿಸಿ ಬಂದ ಕಾರೊಂದು ಹರಿದ ಪರಿಣಾಮ ಇಬ್ಬರೂ ಮೃತಪಟ್ಟ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.
ಮೃತರನ್ನು ಇನ್ನಂಜೆ ಮುಂಡೇಡಿಯ ಪುಷ್ಪ (36) ಹಾಗೂ ಆಕೆಯ ಮೂರು ವರ್ಷದ ಮಗ ತಕ್ಷ್ ಎಂದು ಗುರುತಿಸಲಾಗಿದೆ.
ಇನ್ನಂಜೆಯ ನಿರಂಜನ್ ಎಂಬವರ ಪತ್ನಿ ಪುಷ್ಪ ಅಂಗನವಾಡಿ ಸಹಾಯಕಿಯಾಗಿದ್ದು, ಮಗನೊಂದಿಗೆ ಉಡುಪಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದಾಗ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳದಲ್ಲಿ ಸೇರಿದ ಸಾರ್ವಜನಿಕರು ತಕ್ಷಣ ತಾಯಿ-ಮಗುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಇಬ್ಬರು ಮೃತಪಟ್ಟಿರುವುದನ್ನು ದೃಢಪಡಿಸಿದರು. ಕೇರಳ ಮೂಲದ ಸ್ವಿಫ್ಟ್ ಕಾರು ಮಂಗಳೂರಿನಿಂದ ಉಡುಪಿಯತ್ತ ಅತೀ ವೇಗವಾಗಿ ಸಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ ಕಾರು ಪಾಂಗಾಳ ಪೇಟೆ ಸಮೀಪದ ಹೊಂಡಕ್ಕೆ ಇಳಿದಿದೆ. ಕಾರಿನಲ್ಲಿದ್ದ ಯಾರಿಗೂ ಯಾವುದೇ ಗಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.