ಮನೆಗಳಿಗೆ ನುಗ್ಗಿ ಅಮಾಯಕರಿಗೆ ಕಿರುಕುಳ ಆರೋಪ: ಕೊಣಾಜೆ ಠಾಣೆ ಬಳಿ ಜಮಾಯಿಸಿದ ಸ್ಥಳೀಯರು
ಮಂಗಳೂರು, ನ. 13: ಕೊಲೆ ಯತ್ನ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿರುವ ಪೊಲೀಸರು ರಾತ್ರಿ ವೇಳೆಯಲ್ಲಿ ಮನೆಗಳಿಗೆ ನುಗ್ಗಿ ಅಮಾಯಕರನ್ನು ವಶಕ್ಕೆ ಪಡೆದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನೂರಾರು ಮಂದಿ ಇಂದು ಕೊಣಾಜೆ ಪೊಲೀಸ್ ಠಾಣೆ ಬಳಿ ಸೇರಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ. ಆದರೆ. ಸೆ. 144 ಜಾರಿಯಲ್ಲಿದ್ದುದರಿಂದ ಪೊಲೀಸರು ಪ್ರತಿಭಟನಕಾರರ ಮನವೊಲಿಸಿ ಪ್ರತಿಭಟನೆ ನಡೆಸದಂತೆ ಮನವಿ ಮಾಡಿದರು.
ಕೊಲೆ ಯತ್ನ ಪ್ರಕರಣದ ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು ಮನೆಗಳಿಗೆ ನುಗ್ಗಿ ಮನೆಮಂದಿಯನ್ನು ಕಿರುಕುಳ ನೀಡುತ್ತಿದ್ದಾರೆ. ಅಮಾಯಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಪೊಲೀಸರ ಈ ಕ್ರಮದಿಂದ ನಾವು ಭಯಬೀತರಾಗಿದ್ದೇವೆ ಎಂದು ಮಹಿಳೆಯರೂ ಸೇರಿದಂತೆ ಪ್ರತಿಭಟನಕಾರರು ಆರೋಪಿಸಿದರು.
ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೊಣಾಜೆ ಠಾಣೆ ಬಳಿ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಲು ತೊಡಗಿದಾಗ ಪೊಲೀಸರು ಮುಂಜಾಗೃತಾ ಕ್ರಮವಾಗಿ ಬಂದೋಬಸ್ತ್ ಏರ್ಪಡಿಸಿದರು. ಜಮಾಯಿಸಿದ ಪ್ರತಿಭಟನಕಾರರನ್ನು ಪೊಲೀಸರು ಚದುರಿಸಿದರು. ಅನಂತರ ಪ್ರತಿಭಟನಕಾರರು ಅಸೈಗೋಳಿ ಜಂಕ್ಷನ್ ಬಳಿ ಜಮಾಯಿಸಿದರು. ಪೊಲೀಸರು ಅಲ್ಲಿಗೂ ತೆರಳಿ ಅವರನ್ನು ಚದುರಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಪಿಐ ಮುಖಂಡರು ಪೊಲೀಸರಲ್ಲಿ ಮನವಿ ಮಾಡಿ ನೈಜ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಹಾಗೂ ಅಮಾಯಕರಿಗೆ ಕಿರುಕುಳ ನೀಡದಂತೆ ಆಗ್ರಹಿಸಿದರು.
ಪೊಲೀಸ್ ಹಿರಿಯ ಅಧಿಕಾರಿಗಳಾದ ಎಸಿಪಿಗಳಾದ ಉದಯ ನಾಯಕ್, ತಿಲಕ್‌ಚಂದ್ರ, ರಾಜೇಂದ್ರ, ಶೃತಿ, ಇನ್ಸ್‌ಪೆಕ್ಟರ್ ಅಶೋಕ್, ಎಸ್‌ಐ ಸುಕುಮಾರನ್ ಮುಂತಾದ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.