×
Ad

ವರ್ಷಕ್ಕೆ ಒಂದೇ ಡಾಲರ್ ವೇತನ ಪಡೆಯುವೆ, ರಜೆ ಬೇಡ: ಟ್ರಂಪ್

Update: 2016-11-14 11:13 IST

 ವಾಷಿಂಗ್ಟನ್, ನ.14: ಅಮೆರಿಕದ ಅಧ್ಯಕ್ಷನಾಗಿ ನಾನು 400,000 ಯುಎಸ್ ಡಾಲರ್ ವೇತನದ ಬದಲಿಗೆ ವಷಕ್ಕೆ ಒಂದೇ ಡಾಲರ್ ಸ್ವೀಕರಿಸುವೆ. ಹೆಚ್ಚು ರಜೆಯೂ ನನಗೆ ಬೇಕಾಗಿಲ್ಲ ಎಂದು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಮೆರಿಕದ 45ನೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

 ‘‘ಕಾನೂನಿನ ಪ್ರಕಾರ ನಾನು ವರ್ಷಕ್ಕೆ ಕೇವಲ 1 ಡಾಲರ್ ವೇತನ ಸ್ವೀಕರಿಸುವೆ. ಆದರೆ, ವೇತನದ ಬಗ್ಗೆ ನನಗೇನೂ ಗೊತ್ತಿಲ್ಲ’’ ಎಂದು 60 ನಿಮಿಷಗಳ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಈ ಹೇಳಿಕೆಯ ಮೂಲಕ ಸೆಪ್ಟಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ ತಾನು ನೀಡಿದ್ದ ಭರವಸೆ ಈಡೇರಿಸುವ ಸೂಚನೆ ನೀಡಿದ್ದಾರೆ.

ಚುನಾವಣೆಯ ಪ್ರಚಾರದ ವೇಳೆ, ತಾವು ಅಧ್ಯಕ್ಷರಾದರೆ, ವೇತನವನ್ನು ಸ್ವೀಕರಿಸುತ್ತೀರೋ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ 70ರ ಪ್ರಾಯದ ಟ್ರಂಪ್,‘‘ನಾನು ಒಂದು ಪೈಸೆಯೂ ವೇತನ ಪಡೆಯುವುದಿಲ್ಲ’’ ಎಂದು ಹೇಳಿದ್ದರು.

‘‘ಅಮೆರಿಕದ ಅಧ್ಯಕ್ಷರಿಗೆ ಎಷ್ಟು ವೇತನವಿರುತ್ತದೆ ಎಂಬ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ, ಅಧ್ಯಕ್ಷನಾಗಿ ನಾನು ರಜೆ ಮಾಡುವುದಿಲ್ಲ. ನಮಗೆ ಸಾಕಷ್ಟು ಕೆಲಸ ಮಾಡಲು ಇರುತ್ತದೆ. ನಾನು ಜನ ಸೇವೆಗಾಗಿ ಸದಾ ಸಿದ್ಧನಿದ್ದೇನೆ’’ ಎಂದು ಮಂಗಳವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲ್ಲ ಸಮೀಕ್ಷೆಯನ್ನು ಬುಡಮೇಲು ಮಾಡಿ ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರನ್ನು ಮಣಿಸಿ ಅಧ್ಯಕ್ಷರಾಗಿ ಚುನಾಯಿತರಾಗಿರುವ ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News