×
Ad

ರಾಷ್ಟ್ರೀಯ ಧರ್ಮವಾಗಿ ಇಸ್ಲಾಂ ಅನ್ನು ಕೈ ಬಿಡಲಿದೆ ಬಾಂಗ್ಲಾದೇಶ

Update: 2016-11-14 14:12 IST

ಢಾಕಾ, ನ.14: ಬಾಂಗ್ಲಾದೇಶವು ಇಸ್ಲಾಂ ಅನ್ನು ತನ್ನ ರಾಷ್ಟ್ರೀಯ ಧರ್ಮವಾಗಿ ಸೂಕ್ತ ಸಮಯ ಬಂದಾಗ ಕೈಬಿಡಲಿದೆಯೆಂದು ಆಡಳಿತ ಅವಾಮಿ ಲೀಗ್ ಇದರ ಪ್ರೆಸಿಡಿಯಂ ಸದಸ್ಯ ಹಾಗೂ ಮಾಜಿ ಸಚಿವ ಅಬ್ದುರ್ರಝಾಕ್‌ ರವಿವಾರ ಸಾರ್ಕ್ ಕಲ್ಚರಲ್ ಸೊಸೈಟಿ ನ್ಯಾಷನಲ್ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ರೌಂಡ್ ಟೇಬಲ್ ಸಭೆಯೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
‘‘ಸದ್ಯ ರಾಷ್ಟ್ರ ಧರ್ಮವಾಗಿ ಇಸ್ಲಾಂ ಧರ್ಮವನ್ನು ಕೆಲವು ಪ್ರಮುಖ ಕಾರಣಗಳಿಗಾಗಿ ಉಳಿಸಿಕೊಳ್ಳಲಾಗಿದೆ’’ ಎಂದು ಅವರು ಹೇಳಿದ್ದಾರೆ.
‘‘ನಾನು ಈ ಮಾತನ್ನು ಹಿಂದೆ ವಿದೇಶದಲ್ಲಿ ಹೇಳಿದ್ದೇನೆ ಹಾಗೂ ಈಗಲೂ ಹೇಳುತ್ತಿದ್ದೇನೆ. ಇಸ್ಲಾಂ ಧರ್ಮವನ್ನು ರಾಷ್ಟ್ರೀಯ ಧರ್ಮವಾಗಿ ಬಾಂಗ್ಲಾದೇಶದ ಸಂವಿಧಾನದಿಂದ ಸಮಯ ಬಂದಾಗ ಕೈಬಿಡಲಾಗುವುದು’’ ಎಂದು ಅವರು ಹೇಳಿದ್ದಾರೆಂದು ಮಾಧ್ಯಮ ವರದಿಯೊಂದು ತಿಳಿಸಿದೆ.
‘‘ಬಾಂಗ್ಲಾದೇಶದ ಜನರಲ್ಲಿ ಜಾತ್ಯತೀತತೆಯ ಶಕ್ತಿಯಿದೆ. ನಮ್ಮ ದೇಶದಲ್ಲಿ ‘ಅಲ್ಪಸಂಖ್ಯಾತ’ ಎಂಬುದೇನಿಲ್ಲ’’ ಎಂದು ಅವರು ಹೇಳಿದರು.
ದೇಶದ ಸಂವಿಧಾನ 1972 ರಲ್ಲಿ ರಚಿತವಾದಾಗ ಜಾತ್ಯತೀತತೆ ಅದರಲ್ಲಿ ಅಡಕವಾಗಿತ್ತು. ಮುಂದೆ 1975ರಲ್ಲಿ ಶೇಖ್ ಮುಜೀಬುರ್ರಹ್ಮಾನ್ ಅವರ ಹತ್ಯೆಯ ನಂತರ ಅಧಿಕಾರಕ್ಕೆ ಬಂದ ಝಿಯಾವುರ್ರಹ್ಮಾನ್  ‘ಜಾತ್ಯತೀತ’ ಪದದ ಬದಲು ‘‘ ದೇವರಾದ ಅಲ್ಲಾಹ್ ಮೇಲೆ ಸಂಪೂರ್ಣ ನಂಬಿಕೆ ಹಾಗೂ ಶ್ರದ್ಧೆ’’ ಎಂಬುದಾಗಿ ಬದಲಾಯಿಸಿದ್ದರು.
ಇನ್ನೊಬ್ಬ ಮಿಲಿಟರಿ ಸರ್ವಾಧಿಕಾರಿ ಎಚ್.ಎಂ.ಇರ್ಷಾದ್ ನಂತರ ಇಸ್ಲಾಂ ಧರ್ಮವನ್ನು ಸಂವಿಧಾನದಲ್ಲಿ ರಾಷ್ಟ್ರೀಯ ಧರ್ಮವಾಗಿ ಸೇರ್ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News