ಏಕರೂಪ ನಾಗರಿಕ ಸಂಹಿತೆ ಕೈಬಿಡಲು ಸುನ್ನಿ ಜಂ-ಇಯ್ಯತುಲ್ ಉಲಮಾ ಆಗ್ರಹ

Update: 2016-11-14 10:58 GMT

ಬೆಳ್ತಂಗಡಿ, ನ.14: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರವನ್ನು ನಿರಾಕರಿಸುವ ಏಕರೂಪದ ನಾಗರಿಕ ಸಂಹಿತೆಯನ್ನು ತರುವ ಪ್ರಯತ್ನಗಳಿಗೆ ಸರಕಾರ ಮುಂದಾಗುತ್ತಿದ್ದು ಇದನ್ನು ಕೈಬಿಡುವಂತೆ ಕರ್ನಾಟಕ ಸುನ್ನಿ ಜಂ-ಇಯ್ಯತುಲ್ ಉಲಮಾ ಬೆಳ್ತಂಗಡಿ ತಾಲೂಕು ಸಮಿತಿ ಆಗ್ರಹಿಸಿದೆ. 

ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಮುಖಂಡರು ಮಾತನಾಡಿ, ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದರಿಂದ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳಿಗೆ ಚ್ಯುತಿಯಾಗುತ್ತದೆ. ಆದುದರಿಂದ ಕೇಂದ್ರ ಕಾನೂನು ಆಯೋಗವು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರವನ್ನು ಹಿಂಪಡೆಯಬೇಕು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು ಸಮಿತಿ ಒತ್ತಾಯಿಸಿದರು.

ವಿವಾಹ, ತಲಾಖ್ ಮೊದಲಾದ ವೈಯುಕ್ತಿಕ ವಿಚಾರಗಳಲ್ಲಿ ಮಾತ್ರ ಮುಸ್ಲಿಮರಿಗೆ ಶರೀಅತ್ ನಿಯಮಗಳನ್ನು ಪಾಲಿಸಲು ಸಂವಿಧಾನವು ಅವಕಾಶ ನೀಡಿದೆ. ಉಳಿದಂತೆ ದೇಶದ ಕಾನೂನನ್ನು ಎಲ್ಲರೂ ಗೌರವದಿಂದ ಪಾಲಿಸುತ್ತಿದ್ದಾರೆ. ದೇಶದ ಸಂವಿಧಾನಕ್ಕೆ ಹಾಗೂ ಜಾತ್ಯತೀತ, ಧಾರ್ಮಿಕ ಸ್ವಾತಂತ್ರ ಮತ್ತು ವಿವಿಧತೆಯಲ್ಲಿ ಏಕತೆಯೆಂಬ ಅತ್ಯುನ್ನತ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯ ಮಾಡುತ್ತಾರೆ. ತಲಾಖ್ ಮತ್ತು ಬಹುಪತ್ನಿತ್ವಕ್ಕೆ ಇಸ್ಲಾಮಿನಲ್ಲಿ ಅವಕಾಶವಿದೆ ಎಂದ ಮಾತ್ರಕ್ಕೆ ಅದು ಪ್ರೋತ್ಸಾ ಹಲವು ನಿಯಂತ್ರಣಗಳು, ಶರತ್ತುಗಳಿಗೆ ಅವು ಬದ್ಧವಾಗಿದೆ. ಇದರ ಬಗ್ಗೆ ತಿಳಿದುಕೊಳ್ಳದೆ ಇದು ಮಹಿಳಾ ಶೋಷಣೆಗೆ ಕಾರಣವಾಗುತ್ತಿದೆ ಎಂದು ಬಿಂಬಿಸಿ ಮುಸ್ಲಿಮ್ ವ್ಯಯುಕ್ತಿಕ ಕಾನೂನುಗಳನ್ನು ರದ್ದುಪಡಿಸಲು ಹೊರಟಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಭಾರತದಂತಹ ವೈವಿಧ್ಯತೆಗಳ ದೇಶದಲ್ಲಿ ಏಕರೂಪದ ಕಾನೂನು ಬೇಕು ಎಂಬ ಕಲ್ಪನೆಯೇ ಅವಾಸ್ತವಿಕವಾದುದು ಇದೀಗ ಸರಕಾರ ತರಲು ಹೊರಟಿರುವ ತಲಾಖ್ ವಿಚಾರದಲ್ಲಿನ ಹಸ್ತಕ್ಷೇಪ ಅಥವಾ ಏಕರೂಪದ ನಾಗರಿಕ ಸಂಹಿತೆಯ ಜಾರಿಯನ್ನು ಯಾವ ಕಾರಣಕ್ಕೂ ಅಂಗೀಕರಿಸಲಾಗದು. ಇದರ ವಿರುದ್ಧ ಸುನ್ನಿ ಸಂಘಟನೆಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ತೀವ್ರ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಕಾಸಿಂ ಮದನಿ, ಉಮರ್ ಅಸ್ಸಖಾಫ್ ತಂಙಳ್, ಆದಂ ಅಹ್ಸನಿ ತುರ್ಕಳಿಕೆ, ಅಬ್ದುರ್ರಹ್ಮಾನ್ ಸಖಾಫಿ, ಅಹ್ಮದ್ ಶರೀಫ್ ಸಅದಿ ಅಲ್‌ಕಾಮಿಲ್ ಕಿಲ್ಲೂರು, ರಫೀಕ್ ಅಹ್ಸನಿ ಮದ್ದಡ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News