×
Ad

ನೋಟು ರದ್ಧತಿ; ಸಹಕಾರಿ ಪತ್ತಿನ ವ್ಯವಹಾರಕ್ಕೆ ಹೊಡೆತ: ಕೊಳ್ಕೆಬೈಲು

Update: 2016-11-14 18:01 IST

ಉಡುಪಿ, ನ.14: ಒಂದು ಸಾವಿರ ಹಾಗೂ ಐನೂರು ರೂ. ನೋಟಿನ ರದ್ಧತಿಯಿಂದ ಸಹಕಾರಿ ಕ್ಷೇತ್ರದ ಪತ್ತಿನ ವ್ಯವಹಾರದ ಮೇಲೆ ಭಾರೀ ದೊಡ್ಡ ಹೊಡೆತ ಬಿದ್ದಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿ ಯನ್ ಹಾಗೂ ಉಡುಪಿ ತಾಲೂಕು ಇಂಡಸ್ಟ್ರೀಯಲ್ ಕೋಆಪರೇಟಿವ್ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಸೊಸೈಟಿಯ ಸಭಾಂಗಣ ದಲ್ಲಿ ನಡೆದ 63ನೆ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಸಹಕಾರಿ ಸಂಘಗಳಲ್ಲಿ ನಗದು ಹರಿದು ಬರುವುದು ಕಡಿಮೆಯಾಗಿದೆ. ಸಾಲ ಮರುಪಾವತಿ ಹಾಗೂ ಉಳಿತಾಯ ಖಾತೆಗಳಿಗೆ ಹಣ ಹಾಕು ವಂತಿಲ್ಲ. ರಿಸರ್ವ್ ಬ್ಯಾಂಕ್ ಪರವಾನಿಗೆ ನೀಡಿರುವ ಬ್ಯಾಂಕ್‌ಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸಂಸ್ಥೆಗಳಿಗೆ ನೋಟು ಬದಲಾಯಿಸುವ ಅಧಿಕಾರ ಇಲ್ಲ. ಹೀಗಾಗಿ ಸಹಕಾರಿ ಸಂಸ್ಥೆಗಳು ನೋಟು ಬದಲಾಯಿಸುವ ಅಧಿಕೃತ ಸಂಸ್ಥೆಯಾಗಿಲ್ಲ ಎಂದರು.

ಸಾಲ ಮರುಪಾವತಿ ಸೇರಿದಂತೆ ಹಲವು ನಿಯಮಗಳಿಗೆ ರಿಯಾಯಿತಿ ನೀಡುವಂತೆ ಸರಕಾರದೊಂದಿಗೆ ಕೇಳಿಕೊಂಡಿದ್ದೇವೆ. ಸಹಕಾರಿ ಪತ್ತಿನ ಕ್ಷೇತ್ರ ಉಳಿಯಬೇಕಾದರೆ ಮಾಹಿತಿಗಳನ್ನು ಅಪ್‌ಡೆಟ್ ಮಾಡುವುದು ನಮ್ಮ ಮೇಲಿನ ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಸಂಸ್ಥೆಯನ್ನು ನಡೆಸುವುದು ಕಷ್ಟವಾದರೂ ಈ ನೆಲದ ಕಾನೂನನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಮಾತನಾಡಿ, ಇಂದು ಹಳ್ಳಿಗಳು ಸ್ವಾವಲಂಬಿಯಾಗಿ ಹಳ್ಳಿಗಳಾಗಿಯೇ ಉಳಿಯಲು ಸಹಕಾರಿ ಕ್ಷೇತ್ರ ಕಾರಣ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟು 4ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸ ಲಾಗುತ್ತಿದೆ. ಸರಕಾರದ ಗೌರವಧನ ಸಹಿತ ಲೀಟರ್‌ಗೆ 35ರೂ. ಪಾವತಿ ಮಾಡಲಾಗುತ್ತಿದೆ. ಹೀಗೆ ಪ್ರತಿದಿನ 14ಕೋಟಿ ರೂ. ಹಣ ಪಟ್ಟಣದಿಂದ ಹಳ್ಳಿಗಳ ಕಡೆ ಚಲಾವಣೆಯಾಗುತ್ತಿದೆ ಎಂದು ಹೇಳಿದರು.

‘ಶಿಕ್ಷಣ ಮತ್ತು ತರಬೇತಿಯ ಮೂಲಕ ಸಹಕಾರ ಸಂಘಗಳನ್ನು ಬಲಪಡಿಸುವುದು’ ಎಂಬ ವಿಷಯದ ಕುರಿತು ಉಡುಪಿ ಎಂಜಿಎಂ ಕಾಲೇಜಿನ ಉಪ ನ್ಯಾಸಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಇಂಡಸ್ಟ್ರಿಯ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ವಹಿಸಿದ್ದರು.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯೆ ಅಮೃತಾ ಕೃಷ್ಣಮೂರ್ತಿ ಆಚಾರ್ಯ, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ್ ನಾಯಕ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕ ವಿಠಲ ಶೇರಿಗಾರ್ ಮುಖ್ಯ ಅತಿಥಿಗಳಾಗಿದ್ದರು.
ಯೂನಿಯನ್ ಉಪಾಧ್ಯಕ್ಷ ಕೆ.ಸುರೇಶ್ ರಾವ್, ಸೊಸೈಟಿಯ ಉಪಾಧ್ಯಕ್ಷ ಎಂ.ಗಣೇಶ್ ಕಿಣಿ ಉಪಸ್ಥಿತರಿದ್ದರು. ಯೂನಿಯನ್ ಕೋಶಾಧಿಕಾರಿ ಜಯ ಕರ ಶೆಟ್ಟಿ ಸ್ವಾಗತಿಸಿದರು. ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ ವಂದಿಸಿದರು. ಸಹನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News