×
Ad

ಕೈರಂಗಳ ಸಮೀಪ ಮದ್ರಸ ವಿದ್ಯಾರ್ಥಿಗೆ ಚೂರಿ ಇರಿತ

Update: 2016-11-14 18:28 IST

ಮಂಗಳೂರು, ನ.14: ನಗರ ಹೊರವಲಯದ ಕೈರಂಗಳ ಸಮೀಪದ ಜಲ್ಲಿಕ್ರಾಸ್ ಎಂಬಲ್ಲಿ ಮದ್ರಸ ವಿದ್ಯಾರ್ಥಿಗೆ ಚೂರಿಯಿಂದ ಇರಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಕೈರಂಗಳ ಜಲ್ಲಿಕ್ರಾಸ್‌ನ ಮೊಯ್ದಿನ್ ಕುಂಞಿ ಯಾನೆ ಮಯ್ಯದ್ದಿ ಎಂಬವರ ಪುತ್ರ ಅಬ್ದುಲ್ ರಾಝಿಕ್ (11) ಎಂಬಾತನಿಗೆ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಇದರಿಂದ ರಾಝಿಕ್‌ನ ಎಡಗೈಗೆ ಗಾಯವಾಗಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ರಾಝಿಕ್ ಎಂದಿನಂತೆ ಮನೆಯಿಂದ ಸ್ವಲ್ಪ ದೂರವಿರುವ ತೋಟಾಲು ಬದ್ರಿಯಾ ಮಸೀದಿಯ ಅಧೀನದಲ್ಲಿರುವ ಮದ್ರಸದಿಂದ ಸಂಜೆ 5:45ಕ್ಕೆ ಮನೆಗೆ ಮರಳುತ್ತಿದ್ದಾಗ ಈ ಕೃತ್ಯ ನಡೆದಿದೆ. ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳು ಕನ್ನಡದಲ್ಲಿ ದಾರಿ ಕೇಳಿದ್ದಾರೆ. ಬಾಲಕ ರಾಝಿಕ್ ದಾರಿ ತೋರಿಸಲು ಮುಂದಾಗುತ್ತಿದ್ದಂತೆಯೇ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ಬಾಲಕ ತಪ್ಪಿಸಿಕೊಂಡು ಬೊಬ್ಬೆ ಹೊಡೆದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

‘ಘಟನೆಯಿಂದ ಬಾಲಕ ಹೆದರಿದ್ದಾನೆ. ಆಸ್ಪತ್ರೆಯಲ್ಲಿ ದಾಖಲಿಸಿದ್ದರೂ ಗಲಿಬಿಲಿಗೊಂಡಿದ್ದಾನೆ. ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ’ ಎಂದು ಬಾಲಕನ ಸಂಬಂಧಿಕರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಆಸ್ಪತ್ರೆಗೆ ಜಮಾಯಿಸಿದ ಯುವಕರು

ಘಟನೆಯ ಸುದ್ದಿ ಪರಿಸರದಾದ್ಯಂತ ಹರಡುತ್ತಿದ್ದಂತೆಯೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಯುವಕರು ಜಮಾಯಿಸಿದ್ದಾರೆ. ಸ್ಥಳಕ್ಕೆ ಎಸಿಪಿ ಶ್ರುತಿ ಭೇಟಿ ನೀಡಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದಾರೆ.

ಕಳೆದ ಮೂರ್ನಾಲ್ಕು ದಿನದಿಂದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಅಲ್ಲಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಸೆ.144ರ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ. ಆದರೂ ಮದ್ರಸದಿಂದ ಒಂಟಿಯಾಗಿ ಮರಳುತ್ತಿದ್ದ ವಿದ್ಯಾರ್ಥಿಗೆ ಹಲ್ಲೆ ನಡೆಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News