ರಘುರಾಮ್ ರಾಜನ್ ಹೆಸರಿನಲ್ಲಿ ವೈರಲ್ ಆದ ನೋಟು ರದ್ದತಿ ಲೇಖನದ ಅಸಲಿಯತ್ತೇನು?
ಹೊಸದಿಲ್ಲಿ,ನ.14: ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಪ್ರಮುಖ ಇಂಗ್ಲಿಷ್ ವಾಣಿಜ್ಯ ದೈನಿಕವೊಂದರಲ್ಲಿ ಬರೆದಿದ್ದರೆನ್ನಲಾದ,ನೋಟು ರದ್ದತಿ ಕುರಿತ ಲೇಖನವೊಂದರ ಮರಾಠಿ ಅನುವಾದವು ‘ಆರ್ಥಿಕ ಅಂಧಾಭಿಮಾನವೂ ಅಪಾಯಕಾರಿಯೇ ’ ಎಂಬ ಶೀರ್ಷಿಕೆಯಡಿ ನ.9ರಂದು ವಾಟ್ಸಾಪ್‌ನಲ್ಲಿ ಹರಿದಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸರಕಾರದ ನೋಟು ರದ್ದತಿ ನಿಷೇಧದ ಕುರಿತು ರಾಜನ್ ಈವರೆಗೂ ಬಹಿರಂಗವಾಗಿ ಪ್ರತಿಕ್ರಿಯಿಸಿಲ್ಲ. ಈ ವಾಟ್ಸಾಪ್ ಸಂದೇಶದ ಬಗ್ಗೆ ಕುತೂಹಲ ತಳೆದ ಪತ್ರಕರ್ತ ರೋರ್ವರು ಇಂಗ್ಲೀಷ್ ವಾಣಿಜ್ಯ ಪತ್ರಿಕೆಯ ವೆಬ್ ಸೈಟ್‌ನ್ನು ಜಾಲಾಡಿದಾಗ ರಾಜನ್ ಬರೆದಿರುವ ಯಾವುದೇ ಲೇಖನ ಅಲ್ಲಿರಲಿಲ್ಲ.
ಈ ಲೇಖನವನ್ನು ದಿಟಕ್ಕೂ ಬರೆದವರು ಎನ್‌ಸಿಪಿ ಶಾಸಕ ಡಾ.ಜಿತೇಂದ್ರ ಅವದ್ ಎನ್ನುವುದನ್ನು ಪತ್ತೆ ಹಚ್ಚುವಲ್ಲಿ ಆ ಪತ್ರಕರ್ತರು ಕೊನೆಗೂ ಯಶಸ್ವಿಯಾಗಿದ್ದಾರೆ. ಅವದ್ ಈ ಲೇಖನವನ್ನು ಮೊದಲು ತನ್ನ ಖಾಸಗಿ ಬ್ಲಾಗ್‌ನಲ್ಲಿ ಪ್ರಕಟಿಸಿ ಬಳಿಕ ತನ್ನ ಫೇಸಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದರು. ಯಾರೋ ಈ ಲೇಖನಕ್ಕೆ ರಘುರಾಮ್ ರಾಜನ್ ಹೆಸರನ್ನು ಜೋಡಿಸಿ ವಾಟ್ಸಾಪ್‌ನಲ್ಲಿ ಹರಿಬಿಟ್ಟಿದ್ದರು.
ಸದ್ರಿ ಪತ್ರಕರ್ತ ತನ್ನನ್ನು ಸಂಪರ್ಕಿಸುವವರೆಗೂ ಬೇರೊಬ್ಬರ ಹೆಸರಿನಲ್ಲಾದರೂ ತನ್ನ ಲೇಖನ ಇಷ್ಟೊಂದು ಜನಪ್ರಿಯಗೊಂಡಿದ್ದು ಅವದ್‌ಗೆ ಗೊತ್ತೇ ಇರಲಿಲ್ಲ.
‘‘ಇದನ್ನು ಕೇಳಿ ನನಗೆ ಆಘಾತವಾಗಿತ್ತು. ನೋಟು ರದ್ದತಿ ಕ್ರಮದ ಕುರಿತು ನನ್ನ ಚಿಂತನೆಗಳನ್ನು ಈ ಲೇಖನದಲ್ಲಿ ವ್ಯಕ್ತಪಡಿಸಿದ್ದೆ. ಈ ಕ್ರಮ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ಗುರಿ ಮಾಡುತ್ತದೆ ಎಂದು ನನಗನಿಸಿತ್ತು. ಈ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಲೇಖನವನ್ನು ಬರೆದಿದ್ದೆ. ನ.9ರಂದು ಮಧ್ಯಾಹ್ನ ನನ್ನ ಬ್ಲಾಗಿನಲ್ಲಿ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದೆ ’’ಎಂದು ಅವದ್ ಹೇಳಿದರು.
ಅಂತರ್ಜಾಲದಲ್ಲಿ ಈ ಲೇಖನವನ್ನು ಎತ್ತಿದ ಯಾರೋ ಅದಕ್ಕೆ ರಾಜನ್ ಹೆಸರನ್ನು ಜೋಡಿಸಿದ್ದರು.
‘‘ನನ್ನ ಲೇಖನಕ್ಕಾಗಿ ಮೋದಿ ಭಕ್ತರಿಂದ ವ್ಯಾಪಕ ಟೀಕೆಗಳು ಬರುತ್ತವೆ ಎಂದು ನಾನು ಆರಂಭದಲ್ಲಿ ಭಾವಿಸಿದ್ದೆ. ಆದರೆ ನಾನು ಬರೆದಿದ್ದನ್ನು ಜನರು ಮೆಚ್ಚಿದ್ದಾರೆಂದು ನನಗೆ ಈಗ ಗೊತ್ತಾಗಿದೆ. ಆರ್ಥಿಕತೆಯ ಕುರಿತು ನನ್ನ ತಿಳುವಳಿಕೆ ಜನಪರವಾಗಿದೆ ಎನ್ನುವುದು ನನಗೆ ಸಮಾಧಾನ ತಂದಿದೆ’’ ಎಂದರು.