ಗ್ರಾಹಕರನ್ನು ಸಮಾಧಾನಿಸಿದ ಸಂಸದೆ ಶೋಭಾ

Update: 2016-11-14 13:36 GMT

ಪುತ್ತೂರು, ನ.14: ಸಂಸದೆ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರು ಸೋಮವಾರ ನೋಟುಗಳನ್ನು ವಿನಿಮಯಗೊಳಿಸಲು ಪುತ್ತೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯ ಮುಂಭಾಗದಲ್ಲಿ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ಗ್ರಾಹಕರ ಸಮಸ್ಯೆಗಳನ್ನು ಆಲಿಸಿ ಅವರನ್ನು ಸಮಾಧಾನಿಸಿದರು.

ಬ್ಯಾಂಕ್ ಕಚೇರಿಗೆ ಮುಂಭಾಗದಲ್ಲಿ ಕಾಯುತ್ತಿದ್ದ ಪ್ರತಿಯೊಬ್ಬ ಗ್ರಾಹಕರನ್ನೂ ಮಾತನಾಡಿಸಿದ ಶೋಬಾ ಕರಂದ್ಲಾಜೆ, ಅವರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಇದು ದೇಶದ ಹಿತದೃಷ್ಟಿಯಿಂದ ಕೈಗೊಂಡ ತೀರ್ಮಾನವಾಗಿದ್ದು, ಸ್ವಲ್ಪ ತಾಳ್ಮೆ ವಹಿಸಿ. ಕೆಲವೇ ದಿನಗಳಲ್ಲಿ ಎಲ್ಲಾ ಒತ್ತಡ ಕಡಿಮೆಯಾಗಲಿದೆ ಎಂದು ಸಮಾಧಾನಿಸಿದರು. ಬಳಿಕ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್‌ರನ್ನು ಭೇಟಿಯಾಗಿ ಸಮಸ್ಯೆಯ ಮಾಹಿತಿಗಳನ್ನು ಪಡೆದುಕೊಂಡರು.

ಅಶಕ್ತರು, ಅಸೌಖ್ಯ ಪೀಡಿತರು, ವಯೋವೃದ್ಧರು ಆಗಮಿಸಿದಲ್ಲಿ ತಕ್ಷಣವೇ ಅವರಿಗೆ ಸೇವೆ ನೀಡುವಂತೆ ಸೂಚಿಸಿದರು. ಎಟಿಎಂಗಳಲ್ಲಿ ಬೇಗನೆ ಹಣ ಖಾಲಿ ಆಗುತ್ತಿರುವ ಬಗ್ಗೆ ವಿಚಾರಿಸಿದ ಅವರು, ತಾಂತ್ರಿಕ ಸಮಸ್ಯೆಗಳು ನಿವಾರಣೆ ಆಗಿದೆಯೇ ಎಂದು ಕೇಳಿದರು. ಹಣದ ಚಿಂತೆಯಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದ ಕೆಲವು ಗ್ರಾಹಕರು ಸಂಸದರ ಪ್ರಶ್ನೆಗಳಿಗೆ ಹೆಚ್ಚೇನೂ ಉತ್ತರಿಸದೆ ನಗುವಿನ ಉತ್ತರ ನೀಡಿ ಸುಮ್ಮನಾಗುತ್ತಿದರು.

ದು:ಖಿತ ಮಹಿಳೆಗೆ ತುರ್ತು ಹಣ ಕೊಡಿಸಿದ ಸಂಸದೆ

ಸಂಸದೆ ಶೋಭಾ ಕರಂದ್ಲಾಜೆಯವರು ಬ್ಯಾಂಕ್ ಮ್ಯಾನೇಜರ್ ಜೊತೆ ಮಾತುಕತೆ ನಡೆಸಿ ಹೊರಬರುತ್ತಿದ್ದಂತೆ ಹೊರಭಾಗದಲ್ಲಿ ಮಹಿಳೆಯೊಬ್ಬರು ತನ್ನ ಸಂಗಡಿಗನೊಂದಿಗೆ ದು:ಖಿಸುತ್ತಾ ನಿಂತಿರುವುದನ್ನು ಗಮನಿಸಿದರು. ತಕ್ಷಣವೇ ಅವರ ಬಳಿಗೆ ತೆರಳಿದ ಶೋಭಾ ಅವರು ಕಾರಣವನ್ನು ಕೇಳಿದಾಗ ತನ್ನ ಸಂಬಂಧಿಕರು ಆಸ್ಪತ್ರೆಯಲ್ಲಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಬೇಕಾಗಿದೆ. ಬಿಲ್ಲು ಪಾವತಿ ಮಾಡಲು ಹಣವಿಲ್ಲ. ಆದರೆ ಬ್ಯಾಂಕ್‌ನಲ್ಲಿ ಹಣವಿದ್ದರೂ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡರು.

ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಂಸದೆ ಅವರು ಆಕೆಯನ್ನು ಬ್ಯಾಂಕ್ ಮ್ಯಾನೇಜರ್ ಬಳಿಗೆ ಕಳುಹಿಸಿ ತುರ್ತು ಸಂದರ್ಭವಾದ ಕಾರಣ ತಕ್ಷಣವೇ ಹಣ ಪಾವತಿಸುವಂತೆ ಮಾಡಿದರು. ಮಹಿಳೆ ನೆಮ್ಮದಿಯಿಂದ ಹಿಂತಿರುಗುವಂತಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜೀವಂಧರ್ ಜೈನ್, ಗೋಪಾಲಕೃಷ್ಣ ಹೇರಳೆ, ಆರ್.ಸಿ. ನಾರಾಯಣ್, ನಿತೀಶ್ ಶಾಂತಿವನ, ಕೇಶವ ಗೌಡ ಬಜತ್ತೂರು ಮತ್ತಿತರರು ಸಂಸದೆ ಶೋಬಾ ಕರಂದ್ಲಾಜೆ ಅವರೊಂದಿಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News