×
Ad

ನ.18ರಿಂದ 20ರವರೆಗೆ ಆಳ್ವಾಸ್ ನುಡಿಸಿರಿ ಸಮ್ಮೇಳನ

Update: 2016-11-14 19:42 IST

ಮಂಗಳೂರು, ನ. 14: ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಈ ಬಾರಿ ನ.18ರಿಂದ 20ರವರೆಗೆ ಮೂಡಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ, ನುಡಿಸಿರಿ ರೂವಾರಿ ಡಾ.ಎಂ.ಮೋಹನ ಆಳ್ವ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಭಾಷಾ ಪಂಡಿತೆ ಡಾ.ಬಿ.ಎನ್.ಸುಮಿತ್ರಾ ಬಾಯಿ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಕನ್ನಡ ನಾಡು ನುಡಿಯ ಕಂಪನ್ನು ಎಲ್ಲೆಡ ಪಸರಿಸುವ ನಿಟ್ಟಿನಲ್ಲಿ ಕಳೆದ 12 ವರ್ಷಗಳಿಂದ ಯಶಸ್ವಿಯಾಗಿ ಆಳ್ವಾಸ್ ನುಡಿಸಿರಿಯನ್ನು ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿ 13ನೆ ವರ್ಷದ ಸಮ್ಮೇಳನಕ್ಕೆ ಸಿದ್ಧತೆ ಅಂತಿಮ ಹಂತದಲ್ಲಿದೆ ಎಂದು ಡಾ.ಆಳ್ವ ನುಡಿದರು.

ಪ್ರತಿ ದಿನ 1 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ನುಡಿಸಿರಿಗೆ ರಾಜ್ಯದ 30 ಜಿಲ್ಲೆಗಳಿಂದ ಪ್ರತಿನಿಧಿಗಳು ಹೆಸರು ನೋಂದಾಯಿಸಿದ್ದು, 35,000 ಪ್ರತಿನಿಧಿಗಳಿಗೆ ವಸತಿ-ಊಟ ವ್ಯವಸ್ಥೆ ಕಲ್ಪಿಸಲಾಗುವುದು. ಕಳೆದ ವರ್ಷ ನುಡಿಸಿರಿ, ವಿರಾಸತ್ ಮತ್ತು ರಾಜ್ಯದ ವಿವಿದೆಢೆ ನೀಡಿದ ಕಾರ್ಯಕ್ರಮಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಟ್ಟು 15 ಲಕ್ಷ ರೂ. ಅನುದಾನ ನೀಡಿದೆ ಎಂದು ಅವರು ಹೇಳಿದರು.

‘ಕರ್ನಾಟಕ - ನಾಳೆಗಳ ನಿರ್ಮಾಣ’ ಪರಿಕಲ್ಪನೆ

‘ಕರ್ನಾಟಕ - ನಾಳೆಗಳ ನಿರ್ಮಾಣ’ ಎಂಬ ಪರಿಕಲ್ಪನೆಯಡಿ ಈ ಬಾರಿಯ ನುಡಿಸಿರಿ ನಡೆಯಲಿದೆ. ಭೂತಕಾಲ, ವರ್ತಮಾನ ಈ ಎರಡರ ಸಾಧಕ-ಬಾಧಕ, ಒಳಿತು-ಕೆಡುಕುಗಳಿಗೆ ದೃಷ್ಟಿಹಾಯಿಸಿ ಭವಿಷ್ಯ ನಿರ್ಮಾಣದ ಕುರಿತು ಚರ್ಚಿಸಬೇಕಾಗಿದೆ. ಆತಂಕ-ಭಯ, ಹಿಂಸೆ-ಕ್ರೌರ್ಯ, ಬಡತನ-ವೌಢ್ಯಗಳು ಮರೆಯಾಗಿ ಶಾಂತಿ-ಸಮೃದ್ಧಿ, ಸುಖ-ಸಂತೋಷಗಳನ್ನು ಭವಿಷ್ಯದಲ್ಲಿ ಕಾಣಬೇಕಾಗಿದೆ. ನಮ್ಮ ಹಿರಿಯರು ನಮಗಾಗಿ ಬಿಟ್ಟುಹೋದ ಆಚಾರ- ವಿಚಾರ, ಪ್ರಕೃತಿ-ಪರಿಸರ, ಭಾಷೆ-ಸಂಸ್ಕೃತಿಗಳನ್ನು ಜತನದಿಂದ ಕಾಯುವ, ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ನಮ್ಮದಾಗಬೇಕು ಎಂದು ಅವರು ಹೇಳಿದರು.

ಡಾ.ಜಯಂತ ಗೌರೀಶ ಕಾಯ್ಕಿಣಿಯಿಂದ ಉದ್ಘಾಟನೆ

ನವೆಂಬರ್ 18ರಂದು ಬೆಳಗ್ಗೆ 9:30ರಿಂದ 11.30ರವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಮಕಾಲೀನ ಕನ್ನಡ ಸಾಹಿತಿಗಳಲ್ಲಿ ಪ್ರಮುಖರಾಗಿರುವ ಡಾ.ಜಯಂತ ಗೌರೀಶ ಕಾಯ್ಕಿಣಿಯವರು ಈ ಬಾರಿಯ ನುಡಿಸಿರಿಗೆ ಚಾಲನೆ ನೀಡಲಿದ್ದಾರೆ. ಅಂದು ಬೆಳಿಗ್ಗೆ ಉದ್ಘಾಟನೆಗೆ ಮೊದಲು 8.30ರಿಂದ 9.30ರವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು ರಾಜ್ಯದ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ 100 ಕ್ಕಿಂತಲೂ ಹೆಚ್ಚು ಸಾಂಸ್ಕೃತಿಕ ತಂಡಗಳ ಭವ್ಯ ಮೆರವಣಿಗೆ ನಡೆಯಲಿದೆ. ಮುಖ್ಯ ಪರಿಕಲ್ಪನೆಗೆ ಪೂರಕವಾಗಿ ಸೋದರ ಭಾಷೆಗಳು : ನಾಳೆಗಳ ನಿರ್ಮಾಣ, ಧರ್ಮ ಮತುತಿ ರಾಜಕಾರಣ: ನಾಳೆಗಳ ನಿರ್ಮಾಣ, ಕಲೆ ಮತ್ತು ಮಾಧ್ಯಮ: ನಾಳೆಗಳ ನಿರ್ಮಾಣ ಹಾಗೂ ಕೃಷಿ ಮತ್ತು ಪರಿಸರ: ನಾಳೆಗಳ ನಿರ್ಮಾಣ ಎಂಬ ನಾಲ್ಕು ಪ್ರಧಾನಗೋಷ್ಠಿಗಳು ನಡೆಯಲಿವೆ. ಇದೇ ಮುಖ್ಯ ಪರಿಕಲ್ಪನೆ ಆಧಾರವಾಗಿ ಆರು ವಿಶೇಷೋಪನ್ಯಾಸಗಳು, ಒಂಬತ್ತು ಕವಿಸಮಯ-ಕವಿನಮನಗಳು ನಡೆಯಲಿವೆ. ನಮ್ಮನ್ನಗಲಿದ ಹಿರಿಯ ಸಾಹಿತಿ ಡಾ.ಸಾ.ಶಿ.ಮರುಳಯ್ಯ ಅವರನ್ನು ಸ್ಮರಿಸುವ ಸಂಸ್ಮರಣೆ, ಕನ್ನಡದ ಆಸ್ತಿ ಮಾಸ್ತಿಯವರ ನೆನಪು ‘ ಹಿರಿಯರ ನೆನಪು’ ಹಾಗೂ ನೂರು ವರ್ಷಗಳ ನೆನಪಿನಲ್ಲಿ ಡಾ.ದೇ.ಜವರೇಗೌಡ ಹಾಗೂ ಡಿ.ದೇವರಾಜ ಅರಸು ಅವರನ್ನು ‘ಶತಮಾನದ ನೆನಪು’ನಲ್ಲಿ ಸ್ಮರಿಸಲಿದ್ದೇವೆ ಎಂದರು.

13 ಮಂದಿ ಸಾಧಕರಿಗೆ ಪ್ರಶಸ್ತಿ

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕನ್ನಡ ನಾಡು- ನುಡಿ-ಸಂಸ್ಕೃತಿಗಳಿಗಾಗಿ ಶ್ರಮಿಸಿದ ಹದಿಮೂರು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ನ.20ರ ಸಂಜೆ 4 ಗಂಟೆಗೆ ಆಳ್ವಾಸ್ ನುಡಿಸಿರಿ ಸಾಧಕರನ್ನು ‘ಆಳ್ವಾಸ್ ನುಡಿಸಿರಿ ಪ್ರಶಸಿತಿ’ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 25,000 ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ ಎಂದು ಡಾ.ಆಳ್ವ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಡಾ.ಸತ್ಯನಾರಾಯಣ ಮಲ್ಲಿಪಟ್ಣ, ಕೋಟಿ ಪ್ರಸಾದ್ ಆಳ್ವ, ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ, ಪಿಆರ್‌ಒ ಡಾ. ಪದ್ಮನಾಭ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News