×
Ad

ತಂಡಗಳ ನಡುವೆ ಗಲಾಟೆ: ಇಬ್ಬರು ಆಸ್ಪತ್ರೆಗೆ

Update: 2016-11-14 20:07 IST

ಪುತ್ತೂರು, ನ.14: ಪುತ್ತೂರು ನಗರದ ಹೊರವಲಯದಲ್ಲಿರುವ ನೆಹರೂ ನಗರದ ಕಬಾಬ್ ಸೆಂಟರ್ ಬಳಿ ಎರಡು ತಂಡಗಳ ನಡುವೆ ಹಲ್ಲೆ ಘಟನೆ ಸಂಭವಿಸಿದ್ದು, ಹಲ್ಲೆಗೊಳಗಾಗಿರುವ ತಂಡವೊಂದರ ಇಬ್ಬರು ಗಾಯಾಳುಗಳು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇತ್ತಂಡದವರು ಪರಸ್ಪರ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು ಇತ್ತಂಡಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೆಹರೂನಗರ ನಿವಾಸಿ ರಮೇಶ್ ಎಂಬವರ ಪುತ್ರ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ರಜನೀಶ್(23) ಮತ್ತು ನೆಹರೂನಗರ ರಕ್ತೇಶ್ವರಿ ವಠಾರದ ಅಣ್ಣಪ್ಪ ನಾಯ್ಕ ಎಂಬವರ ಪುತ್ರ ನವೀನ್(25) ಅವರು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ನಾನು ಮತ್ತು ನವೀನ್ ರವಿವಾರ ರಾತ್ರಿ ನೆಹರೂನಗರದ ಕಬಾಬ್ ಸೆಂಟರ್‌ಗೆ ಹೋಗಿದ್ದೆವು. ಇದೇ ಸಮಯದಲ್ಲಿ ಅಲ್ಲಿಗೆ ಬಂದ ಯತೀಂದ್ರ, ವಿನೋದ್, ಸಾತ್ವಿಕ್, ವಿನಯ್ ಎಂಬವರು ನಮ್ಮೊಂದಿಗೆ ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ ಎಂದು ರಜನೀಶ್ ಆರೋಪಿಸಿದ್ದಾರೆ. ಹಲ್ಲೆಯಿಂದಾಗಿ ನನ್ನ ಕುತ್ತಿಗೆ ಮತ್ತು ಎಡ ಕೈಗೆ ಗಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. ನಾವು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದು ಆರೋಪಿಗಳು ಮತ್ತೆ ರಜನೀಶ್ ಮತ್ತು ನನ್ನ ಮೊಬೈಲ್‌ಗೆ ಪೋನ್ ಮಾಡಿ ಬೆದರಿಕೆಯೊಡ್ಡಿದ್ದಾರೆ ಎಂದು ನವೀನ್ ಆರೋಪಿಸಿದ್ದಾರೆ. 

ಇದೇ ಘಟನೆಗೆ ಸಂಬಂಧಿಸಿ ಬನ್ನೂರು ಗ್ರಾಮದ ಜೈನರಗುರಿ ನಿವಾಸಿ ಬಾಲಕೃಷ್ಣ ಎಂಬವರ ಪುತ್ರ ಯತೀಂದ್ರ ಅವರು ‘ ನಾನು ನೆಹರುನಗರ ಹೊಟೇಲ್‌ನಲ್ಲಿದ್ದ ವೇಳೆ ಅಲ್ಲಿಗೆ ಬಂದ ರಜನೀಶ್, ಧನು ಯಾನೆ ಧನಂಜಯ, ಮನೀಷ್, ನವೀನ್, ಪ್ರಸಾದ್ ಮತ್ತಿತರರು ಸೇರಿಕೊಂಡು ನನಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಪುತ್ತೂರು ನಗರ ಠಾಣಾ ಪೊಲೀಸರು ಇತ್ತಂಡಗಳ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News