×
Ad

ರಾಜ್ಯ ಸರಕಾರ ಸತ್ತು ಹೋಗಿದೆ: ಶೋಭಾ ಕರಂದ್ಲಾಜೆ

Update: 2016-11-14 20:24 IST

ಪುತ್ತೂರು, ನ.14: ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇಲ್ಲಿ ಸರಕಾರವೇ ಸತ್ತು ಹೋಗಿದೆ. ಯಾರಿಗೂ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಸೋಮವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದ 1,42,000 ಲಕ್ಷ ಕೋಟಿ ರೂ. ಬಜೆಟ್ ಜನಸಾಮಾನ್ಯನಿಗೆ ತಲುಪಿಲ್ಲ. ಕೇಂದ್ರ ಸರಕಾರ ಕೊಟ್ಟ ಅನುದಾನವನ್ನೂ ರಾಜ್ಯ ಸರಕಾರ ದುರುಪಯೋಗ ಮಾಡಿಕೊಂಡಿದೆ. ಕೇಂದ್ರ ಸರಕಾರದ 3,600 ಕೋಟಿ ರಸ್ತೆ, ಒಳಚರಂಡಿ, ಕುಡಿಯುವ ನೀರು ಮತ್ತು ಹಲವಾರು ಕಾರ್ಯಕ್ರಮಗಳಿಗೆ ಹಣ ಬಿಡುಗಡೆಗೊಳಿಸಿತ್ತು. ಆದರೆ ರಾಜ್ಯ ಸರಕಾರದ ಅಧಿಕಾರಿಗಳು ಅನುದಾನವನ್ನು ಬ್ಯಾಂಕ್‌ನಲ್ಲಿಟ್ಟು ಬಡ್ಡಿಯ ಹಣವನ್ನು ಲೆಕ್ಕಹಾಕುತ್ತಿದ್ದಾರೆ, ಅಭಿವೃದ್ಧಿ ಮಾಡುತ್ತಿಲ್ಲ ಎಂದು ದೂರಿದರು.

ರಾಜ್ಯದಲ್ಲಿ 14 ತಿಂಗಳಲ್ಲಿ 18 ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ರಾಜಕೀಯ ಪ್ರೇರಿತ ಹತ್ಯೆಯಾಗಿದೆ. ಮೂಡಬಿದಿರೆಯಿಂದ ಆರಂಭವಾದ ಹತ್ಯೆಗಳು ಒಂದೇ ಮಾದರಿಯಲ್ಲಿವೆ. ವ್ಯವಸ್ಥಿತವಾಗಿ ರಾಜಕೀಯ ಕೊಲೆಗಳು ನಡೆಂುುತ್ತಿದ್ದರೂ ಸರಕಾರ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಇದುವರೆಗೂ ಕೇರಳದಲ್ಲಿ ಇಂತಹ ಕೊಲೆಗಳು ನಡೆಯುತ್ತಿದ್ದವು. ಕಳೆದ ಬಾರಿ ಟಿಪ್ಪುಜಯಂತಿಯ ಸಂದಭರ್ದಲ್ಲಿ ಕಾರ್ಯಕರ್ತರ ಕೊಲೆ ನಡೆದಿತ್ತು. ಆದರೆ ಈ ಬಾರಿ ಟಿಪ್ಪು ಜಯಂತಿ ಘೋಷಣೆಯಾದ ದಿನದಿಂದಲೇ ಸತತ 4 ಕೊಲೆಗಳು ನಡೆದಿವೆ. ಇಂತಹ ಕೊಲೆಗೆಂದೇ ಸರಕಾರ ಕೆಎಫ್‌ಡಿ ಮತ್ತು ಪಿಎಫ್‌ಐ ಹಾಗೂ ಎಸ್‌ಡಿಪಿಐ ಪಕ್ಷವನ್ನು ಬೆಳೆಸುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಬಂದ ಬಳಿಕ ಮೊದಲ ಬಾರಿಗೆ ಅಂತಹ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ಕೇಸನ್ನು ವಾಪಾಸ್ ಪಡೆದುಕೊಂಡು ಓಟ್‌ಬ್ಯಾಂಕ್‌ಗೋಸ್ಕರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ನೀಲಿ ಚಿತ್ರ ವೀಕ್ಷಣೆ ಮಾಡಿದ ಸಚಿವರ ವಜಾ ಮಾಡಿ

ಸಚಿವ ತನ್ವೀರ್ ಸೇಠ್ ಬಗ್ಗೆ ಪ್ರಸ್ತಾಪಿಸಿದ ಅವರು, ನಮ್ಮ ಪಕ್ಷದ ಸಚಿವರು ಅಂತಹ ಆರೋಪ ಬಂದಾಗ 24 ಗಂಟೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ ಸಚಿವರು ತಕ್ಷಣ ಅವರು ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಮುಖ್ಯಮಂತ್ರಿಗಳೇ ಸಂಪುಟದಿಂದ ಕೈಬಿಡಬೇಕು. ಟಿಪ್ಪುವನ್ನು ಯಾರು ಅನುಸರಿಸಲು ಹೊರಡುತ್ತಾರೋ ಅವರೆಲ್ಲರೂ ನಾಶವಾದ ಉದಾಹರಣೆಗಳಿವೆ. ತನ್ವೀರ್ ಸೇಠ್ ಮೂಲಕ ಸರಕಾರ ಕೂಡಾ ನಾಶವಾಗಲಿದೆ ಎಂದರು.

ನೀರಿಲ್ಲದ ಕಂಗೆಟ್ಟಿರುವ ಪ್ರದೇಶಗಳಲ್ಲಿ ಕೊಳವೆಬಾವಿಗಳಿಗೆ ಅವಕಾಶ ನೀಡಬೇಕು. ಇದರಿಂದ ಕುಡಿಯುವ ನೀರಿಗೆ ಸಹಕಾರಿಯಾದೀತು ಮತ್ತು ಕೃಷಿ ಚಟುವಟಿಕೆಗಳಿಗೂ ಸ್ವಲ್ಪ ಪ್ರಮಾಣದಲ್ಲಿ ಉಪಯೋಗಿಸಲು ಅನುಕೂಲವಾಗುವಂತೆ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಮಳೆಯ ಕೊರತೆಯಿಂದ ನೀರಿನ ಕೊರತೆ ಸಂಭವಿಸುವ ಸಾಧ್ಯತೆ ಇದೆ. ಅದಕ್ಕಾಗಿ ಸರಕಾರ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಸಣ್ಣ ಸಣ್ಣ ಕಿಂಡಿ ಅಣೆಕಟ್ಟುಗಳನ್ನು ಅಭಿವೃದ್ಧಿಪಡಿಸಿ ಜಲಮರುಪೂರಣ ವ್ಯವಸ್ಥೆಯನ್ನು ಮಾಡಬೇಕಿದೆ. ಪೈಪ್‌ಲೈನ್ ಮೂಲಕ ಸಮಸ್ಯೆ ಕಂಡುಬಂದಲ್ಲಿ ಕೊಳವೆಬಾವಿಗೆ ಅವಕಾಶ ನೀಡಲೇಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ತಾಲೂಕು ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗೌರಿ ಬನ್ನೂರು, ರಾಮದಾಸ್ ಹಾರಾಡಿ, ಮಹಿಳಾ ಮೋರ್ಚಾದ ಅಧ್ಯಕ್ಷೆ ವಿದ್ಯಾಗೌರಿ, ನಗರಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಕೇಶವ ಗೌಡ ಬಜತ್ತೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News